ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ವಿಧಾನಪರಿಷತ್ ಕಲಾಪದ ವೇಳೆ ದ್ವೇಷ ಭಾಷಣ ನಿಯಂತ್ರಣ ಮಸೂದೆ ಕುರಿತು ಚರ್ಚೆ ನಡೆಯುತ್ತಿರುವಾಗ ಎಂಎಲ್ಸಿ ಸಿಟಿ ರವಿ ಅವರ ಮಾತುಗಳಿಗೆ ಆಕ್ರೋಶಗೊಂಡ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದರು.
ಜಿಹಾದ್, ಕಾಫೀರ್ ಅರ್ಥವನ್ನು ಗೂಗಲ್‌ನಲ್ಲಿ ಪಡೆಯಬಹುದು ಎಂಬ ಸಿ ಟಿ ರವಿ ಅವರ ಮಾತಿಗೆ ಖಡಕ್ ಪ್ರತ್ಯುತ್ತರ ನೀಡಿದ ಲಾಡ್, ದ್ವೇಷ ಭಾಷಣ ನಿಯಂತ್ರಣ ಮಸೂದೆ ಚರ್ಚೆಯಿದು, ಮಸೂದೆಯ ಬಗ್ಗೆ ಮಾತನಾಡಿ, ಮಸೂದೆ ಬಗ್ಗೆ ವಿವರ ಬೇಕಿದ್ದರೆ ಕೇಳಿ ಎಂದು ಹೇಳಿದರು.
ರವಿ ಅವರೇ ಬಿಲ್ ಬಗ್ಗೆ ಮಾತನಾಡಿ, ಅದು ಬಿಟ್ಟು ಪಿಎಚ್.ಡಿ ಮಾಡಿದವರಂತೆ ಮಾತನಾಡಬೇಡಿ. ವಾಕ್ ಸ್ವಾತಂತ್ರ್ಯದಲ್ಲಿ ನಮ್ಮ ದೇಶ 150 ನೇ ರ‍್ಯಾಂಕ್‌ನಲ್ಲಿ ಇದ್ದೇವೆ. ಈ ದೇಶದಲ್ಲಿ ನೀವು ಯಾರಿಗೂ ಮಾತನಾಡಲು ಬಿಡುತ್ತಲೇ ಇಲ್ಲ. ನೀವೇನು ದೊಡ್ಡ ಮಾತನಾಡುತ್ತೀರಿʼʼ ಎಂದು ಪ್ರಶ್ನಿಸಿದರು.
ʻʻನೀವು ಏನು ಬೇಕಾದರೂ ಮಾತನಾಡಬಹುದಾ. ಈ ದೇಶದಲ್ಲಿ ಯಾರಿಗೂ ಸ್ವಾತಂತ್ರ್ಯ ಕೊಟ್ಟಿಲ್ಲ. ಇಲ್ಲಿ ಬಂದು ಬಹಳ ದೊಡ್ಡ ಅಡ್ವೊಕೆಸಿ ಮಾಡ್ತೀರಾ. ಮಾತೆತ್ತಿದರೆ ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತೀರಿ.ʼʼ ಎಂಬ ಸಚಿವ ಲಾಡ್ ಅವರ ಮಾತಿಗೆ ಕೆರಳಿದ ವಿರೋಧಪಕ್ಷದ ಸದಸ್ಯರು ಗದ್ದಲಕ್ಕೆ ಮುಂದಾದರು. ವಾದ ವಿವಾದ ತಾರಕ್ಕೇರಿದಾಗ ಸಭಾಪತಿಯವರು ಸದನವನ್ನು ಹತ್ತು ನಿಮಿಷ ಮುಂದೂಡಿದರು.


