Thursday, December 18, 2025
Menu

“ನೀವು ಕರಾವಳಿಯವರು ಬೆಂಕಿ ಹಚ್ಚುವವರು” ಸದನದಲ್ಲಿ ಕಿಚ್ಚು ಹೊತ್ತಿಸಿದ ಸಚಿವ ಬೈರತಿ

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು “ನೀವು ಕರಾವಳಿಯವರು ಬೆಂಕಿ ಹಚ್ಚೋರು” ಎಂದು ನೀಡಿದ ಹೇಳಿಕೆ ಬೆಳಗಾವಿ ಸುವರ್ಣಸೌಧದದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿತು. ಈ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಚಿವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಭೈರತಿ ಸುರೇಶ್ ಅವರ ‘ನೀವು ಕರಾವಳಿಯವರು ಬೆಂಕಿ ಹಚ್ಚುವವರು’ ಎಂಬ ಹೇಳಿಕೆ ಹೊಸ ವಿವಾದ ಸೃಷ್ಟಿಸಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಕರಾವಳಿ ಭಾಗದ ಬಿಜೆಪಿ ಶಾಸಕರು ಸಚಿವರ ವಿರುದ್ಧ ತಿರುಗಿಬಿದ್ದು, ಕ್ಷಮೆ ಯಾಚನೆಗೆ ಪಟ್ಟು ಹಿಡಿದರು.

ಸಚಿವರ ಮಾತಿನಿಂದ ಕೆರಳಿದ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್ ಮತ್ತು ಚನ್ನಬಸಪ್ಪ ಅವರು ಸಚಿವರ ವಿರುದ್ಧ ಏಕವಚನದಲ್ಲೇ ಕೂಗಾಡಿ, ‘ಕರಾವಳಿ ಸಂಸ್ಕೃತಿಗೆ ನೀವು ಅಪಮಾನ ಮಾಡಿದ್ದೀರಿ, ಕೂಡಲೇ ಕ್ಷಮೆಯಾಚಿ ಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಸುನಿಲ್ ಕುಮಾರ್ ಅವರು ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನೇ ಪ್ರಶ್ನಿಸಿ, ‘ನೀವೂ ಕರಾವಳಿಯವರಲ್ಲವೇ, ಸಚಿವರು ಇಡೀ ಕರಾವಳಿಗೆ ಬೆಂಕಿ ಹಚ್ಚುವವರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರೂ ನೀವು ಸುಮ್ಮನೆ ಕುಳಿತಿದ್ದೀರಲ್ಲಾ, ಪೀಠದಿಂದ ಹೊರಗೆ ಬನ್ನಿ’ ಎಂದು ಆಗ್ರಹಿಸಿದರು.

ಸ್ಪೀಕರ್ ಅವರು ಬೈರತಿ ಅವರ ವಿವಾದಾತ್ಮಕ ಮಾತನ್ನು ಕಡತದಿಂದ ತೆಗೆದುಹಾಕುವುದಾಗಿ ಹೇಳಿದರೂ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಿಜೆಪಿ ಶಾಸಕರ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ಸಭಾಧ್ಯಕ್ಷರು ‘ದ್ವೇಷ ಭಾಷಣ ತಡೆ ವಿಧೇಯಕ’ವನ್ನು ಅಂಗೀಕರಿಸಿದರು.

ಇದಕ್ಕೆ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಆರ್ ಅಶೋಕ ವಿಧೇಯಕದ ಪ್ರತಿಯನ್ನು ಹರಿದು ಹಾಕಿದರು. ಇದು ದ್ವೇಷ ಭಾಷಣ ವಿರೋಧಿ ಬಿಲ್ ಅಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಬಿಲ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಸಚಿವ ಬೈರತಿ ಸುರೇಶ್ ಅವರ ಕ್ಷಮೆಗೆ ಪಟ್ಟು ಮತ್ತು ವಿಧೇಯಕದ ಮರುಪರಿಶೀಲನೆಗೆ ಆಗ್ರಹಿಸಿ ಬಿಜೆಪಿ ಸದಸ್ಯರ ಆಗ್ರಹ ತೀವ್ರಗೊಂಡಿದ್ದು, ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

Related Posts

Leave a Reply

Your email address will not be published. Required fields are marked *