ರೈತ ಯುವಕರನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ರೂ. ಠೇವಣಿ ಇಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಶಾಸಕ ಪುಟ್ಟಣ್ಣ ಒತ್ತಾಯಿಸಿದ್ದಾರೆ. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
ಹಳ್ಳಿಗಳಲ್ಲಿ ರೈತರು, ಕೃಷಿ ಕಾರ್ಮಿಕರು, ಕೂಲಿಕಾರ್ಮಿಕರ ಮಕ್ಕಳನ್ನು ಯಾವ ಹೆಣ್ಮಕ್ಕಳು ಮದುವೆ ಆಗಲು ಒಪ್ಪುತ್ತಿಲ್ಲ. ಹೆಣ್ಮಕ್ಕಳೆಲ್ಲರೂ ಸರ್ಕಾರಿ ನೌಕರರು, ನಗರಗಳಲ್ಲಿರುವ ಗಂಡು ಮಕ್ಕಳನ್ನೇ ಮದುವೆಯಾಗಲು ಬಯಸುತ್ತಿದ್ದಾರೆ. ಹೀಗಾಗಿ ಗಂಡುಮಕ್ಕಳ ಮದುವೆ ಸಮಸ್ಯೆಯಾಗಿ ಪರಿಣಮಿಸಿದೆ. ಹೆಣ್ಣು ಸಿಗಲೆಂದು ಗಂಡು ಮಕ್ಕಳೆಲ್ಲ ಮಲೆ ಮಾದೇಶ್ವರ ಬೆಟ್ಟ, ಧರ್ಮಸ್ಥಳ ಹೀಗೆ ಬೇರೆ ಬೇರೆ ಧಾರ್ಮಿಕ ಕ್ಷೇತ್ರಗಳಿಗೆ ಹರಕೆ, ಪಾದಯಾತ್ರೆ ಮಾಡಿದರೂ ಮದುವೆಯಾಗುತ್ತಿಲ್ಲ.ಅವರ ಅನುಕೂಲಕ್ಕೆ ಸರ್ಕಾರ ಯೋಜನೆ ತರಬೇಕು ಎಂದು ಆಗ್ರಹಿಸಿದ್ದಾರೆ.
ರೈತರ, ಕೃಷಿ ಕಾರ್ಮಿಕರು, ಕೂಲಿಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳ ಹೆಸರಲ್ಲಿ ಕನಿಷ್ಠ 10 ಲಕ್ಷ ರೂ. ಠೇವಣಿ ಭಾಗ್ಯ ಎಂಬ ಹೆಸರಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸಬೇಕು ಎಂಬ ಪುಟ್ಟಣ್ಣ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಎನ್.ಎಸ್.ಬೋಜರಾಜು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು.
25 ಲಕ್ಷ ಕೊಟ್ಟರೆ ಉತ್ತಮ. ಆದರೆ ಕನಿಷ್ಠ 10 ಲಕ್ಷವನ್ನಾದರೂ ಠೇವಣಿ ಇಡುವಂತಾಗಬೇಕು. ಈ ಮೂಲಕ ರೈತ ಯುವಕರನ್ನು ಹೆಣ್ಣು ಮಕ್ಕಳು ಮಕ್ಕಳನ್ನು ಮದುವೆಯಾಗಲು ಉತ್ತೇಜನ ನೀಡಬೇಕು ಎಂದು ಪುಟ್ಟಣ್ಣ ಹೇಳಿದ್ದಾರೆ.


