ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿ ನಡೆಯುತತಿರುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷಕ್ಕೆ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶಿಸಿದ್ದಾರೆ.
2026ರ ಡಿಸೆಂಬರ್ 17ರವರೆಗೆ ತಿಮರೋಡಿ ರಾಯಚೂರನಲ್ಲಿರಬೇಕಿದೆ. ಹೈಕೋರ್ಟ್ ಸೂಚನೆಯಂತೆ ಕಾನೂನಾತ್ಮಕವಾಗಿ ಹೊಸದಾಗಿ ಗಡಿಪಾರು ಆದೇಶ ಜಾರಿಗೊಳಿಸಲಾಗಿದೆ. ಡಿ.7ರಂದು ಸಹಾಯಕ ಆಯುಕ್ತರ ಗಡಿಪಾರು ನೊಟೀಸ್‌ಗೆ ಮಹೇಶ್ ಶೆಟ್ಟಿ ತಿಮರೋಡಿ ಆಕ್ಷೇಪಣೆ ಸಲ್ಲಿಸಿದ್ದ. ಇದೀಗ ಸಹಾಯಕ ಆಯುಕ್ತರು ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ. ತಿಮರೋಡಿ ಪುತ್ತೂರು ಸಹಾಯಕ ಆಯುಕ್ತರ ಎದುರು ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಿದ್ದರು. ತಿಮರೋಡಿ ವಕೀಲರು ಮತ್ತು ಆಯುಕ್ತರ ನಡುವೆ ವಾದ-ವಿವಾದ ನಡೆದು ಆಯುಕ್ತರು ತಿಮರೋಡಿ ವಿರುದ್ಧ ಮತ್ತೆ ಗಡೀಪಾರು ಆದೇಶ ನೀಡಿದ್ದಾರೆ.
ತಿಮರೋಡಿ ವಿರುದ್ಧದ ಈ ಹಿಂದಿನ ಕೇಸ್ಗಳ ಜೊತೆಗೆ ಹಾಲಿ ಕೆಲವು ಕೇಸ್ ಸೇರಿಸಿಕೊಂಡು ಗಡಿಪಾರು ಆದೇಶ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ಸರಹದ್ದಿಗೆ ಗಡಿಪಾರು ಮಾಡಲಾಗಿದೆ.
ಈ ಹಿಂದೆ ತಿಮರೋಡಿ ಆಯುಕ್ತರ ಗಡಿಪಾರು ಆದೇಶ ಪ್ರಶ್ನಿಸಿ ಹಾಗೂ ಆದೇಶವನ್ನು ರದ್ದು ಮಾಡವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಗಡಿಪಾರು ಆದೇಶ ರದ್ದು ಮಾಡಿ. ಸೆಕ್ಷನ್ ಸರಿಪಡಿಸಿ ಹೊಸ ಆದೇಶ ನೀಡುವಂತೆ ಪುತ್ತೂರು ಎಸಿಗೆ ಸೂಚನೆ ನೀಡಿತ್ತು. ಅದರಂತೆ ತಿಮರೋಡಿ ಗಡಿಪಾರು ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಪುತ್ತೂರಿನ ಸಹಾಯಕ ಆಯುಕ್ತೆ ಹೇಳಿದ್ದಾರೆ.


