Thursday, December 18, 2025
Menu

ರಾಜ್ಯದಲ್ಲಿ  ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳು, ಕೈದಿಗಳ ಕೈಯಲ್ಲಿ ಫೋನ್‌, ಡ್ರಗ್ಸ್‌: ಆರ್‌ ಅಶೋಕ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜೈಲುಗಳಲ್ಲಿ ಕೈದಿಗಳ ಕೈಯಲ್ಲಿ ಫೋನ್‌ ಬಂದಿದೆ. ಡ್ರಗ್ಸ್‌ ಮಾಫಿಯಾ ವ್ಯಾಪಕವಾಗಿ ಬೆಳೆದಿದೆ. ಪೊಲೀಸರೇ ಕಳ್ಳರಾಗಿ ಬದಲಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಬಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ   ವಿಧಾನಸಭೆಯಲ್ಲಿ  ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರರಿಗೆ, ಭಯೋತ್ಪಾದಕರಿಗೆ ರೆಸಾರ್ಟ್, ಫೈವ್‌ ಸ್ಟಾರ್‌ ಸೌಲಭ್ಯ ನೀಡಲಾಗುತ್ತಿದೆ. ಕೈದಿಗಳು ಬ್ಯಾರಕ್‌ಗೆ ವರ್ಗಾವಣೆ ಮಾಡಿಸಿ ಕೊಳ್ಳಲು ಜೈಲಧಿಕಾರಿಗಳಿಗೆ ಲಂಚ ನೀಡುತ್ತಾರೆ. ಅದಕ್ಕಾಗಿ ಲಾಬಿಯೂ ನಡೆಯುತ್ತದೆ. ರೌಡಿಶೀಟರ್‌ ಗುಬ್ಬಚ್ಚಿ ಸೀನ ಜೈಲಿನಲ್ಲೇ ಜನ್ಮದಿನ ಆಚರಿಸಿಕೊಂಡ. ಆ ಕೇಕ್‌ ಮೇಲೆ ಹೆಸರು ಬರೆಸಿಕೊಂಡಿದ್ದ. ಅಂತಹ ಕೇಕ್‌ ಜೈಲಿನೊಳಗೆ ಹೇಗೆ ಬಂತು ಎಂದು ತಿಳಿದಿಲ್ಲ. ಭಯೋತ್ಪಾದಕರ ಶಕೀಲ್‌ ಮನ್ನಾ ಕೈಯಲ್ಲಿ ಫೋನ್‌ ಇರುವ ವೀಡಿಯೋ ಹೊರಗೆ ಬಂದಿದೆ. ಇದಕ್ಕೂ ಮುನ್ನ ನಟ ದರ್ಶನ್‌ ಕೈಯಲ್ಲಿ ಸಿಗರೇಟ್‌ ಇರುವ ಫೋಟೋ ಬಂದಿತ್ತು. ಪೊಲೀಸ್‌ ಆಯುಕ್ತರು ಪ್ರತಿ ತಿಂಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಜೈಲಿನ ನಿಯಮದಲ್ಲೇ ಇದೆ. ಆದರೆ ಈ ರೀತಿ ಭೇಟಿಗಳು ನಡೆದಿಲ್ಲ ಎಂದರು.

ಅನಿರೀಕ್ಷಿತ ತಪಾಸಣೆ ಮಾಡಬೇಕೆಂದು ಕೈಪಿಡಿಯಲ್ಲಿ ತಿಳಿಸಲಾಗಿದೆ. ಜೈಲಿನಲ್ಲೇ ಈಗ ಮದ್ಯ ತಯಾರಾಗುತ್ತಿದೆ. ಕೈದಿಗಳು ಮದ್ಯ ತಯಾರಿಸುವುದನ್ನು ಕಲಿತಿದ್ದಾರೆ. ಇದು ಎಣ್ಣೆ ಪಾರ್ಟಿ ಮಾಡುವ ಜೈಲಾಗಿದೆ. ಕಾರವಾರ ಜೈಲಿನಲ್ಲಿ ಕೈದಿಗಳು ಡ್ರಗ್ಸ್‌ ಸೇವಿಸುತ್ತಿದ್ದು, ಅದು ಸಿಗದಿದ್ದಾಗ ಸಿಬ್ಬಂದಿಗೆ ಹೊಡೆದಿದ್ದಾರೆ. ಜೈಲುಗಳಲ್ಲಿ ಜ್ಯಾಮರ್‌ಗಳನ್ನೇ ಹ್ಯಾಕ್‌ ಮಾಡುತ್ತಾರೆ. 777 ಸಿಸಿಟಿವಿ ಕ್ಯಾಮರಾಗಳಿದ್ದು, 100 ಕೆಲಸ ಮಾಡುತ್ತಿಲ್ಲ. 1123 ಕ್ಯಾಮರಾ ಬೇಕೆಂದು ಜೈಲಧಿಕಾರಿ ಕೇಳಿದ್ದರೂ, ಸರ್ಕಾರದ ಬಳಿ ಹಣವಿಲ್ಲದೆ ಖರೀದಿ ಮಾಡಿಲ್ಲ. ಎರಡು ವರ್ಷದಿಂದ ಕೈದಿಗಳಿಗೆ ಕೂಲಿ ಕೊಡಲು ಈಗ ಹಣವಿಲ್ಲ. ಎಷ್ಟು ಹಣ ಬಾಕಿ ಇರಿಸಿಕೊಂಡಿದ್ದಾರೆ ಎಂದು ಸರ್ಕಾರ ತಿಳಿಸಬೇಕಿದೆ ಎಂದರು.

ಪೊಲೀಸರೇ ಕಳ್ಳರು

ಈಗ ರಾಜ್ಯದಲ್ಲಿ ಪೊಲೀಸರೇ ಕಳ್ಳರಾಗಿದ್ದಾರೆ. ಬೆಂಗಳೂರಿನಲ್ಲಿ 11 ತಿಂಗಳಲ್ಲಿ 130 ಪೊಲೀಸರು ಅಪರಾಧಿಗಳ ಜೊತೆ ಶಾಮೀಲಾಗಿ ಅಮಾನತಾಗಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಬ್ಯಾಂಕ್‌ನ 7 ಕೋಟಿ ರೂ. ದರೋಡೆಯಾಗಿದ್ದು, ಅದರ ನೇತೃತ್ವವನ್ನು ಪೊಲೀಸ್‌ ಕಾನ್ಸ್‌ಟೆಬಲ್‌ ವಹಿಸಿಕೊಂಡಿದ್ದ. ಬೀದರ್‌ನಲ್ಲಿ ಬ್ಯಾಂಕ್‌ ಹಣ ಲೂಟಿಯಾದ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗಿಲ್ಲ. ಹಿಂದೆ ಅಪರಾಧಿಗಳಿಗೆ ಪೊಲೀಸರ ಭಯ ಇತ್ತು. ಈಗ ಭಯವೇ ಇಲ್ಲ. 23,000 ಸಕ್ರಿಯ ರೌಡಿಗಳು ರಾಜ್ಯದಲ್ಲಿದ್ದಾರೆ. 43,000 ಬೈಕ್‌ಗಳು ಕಳ್ಳತನವಾಗಿದೆ ಎಂದರು.

ಸೈಬರ್‌ ಅಪರಾಧಗಳಲ್ಲಿ 5,474 ಕೋಟಿ ರೂ. ಕಳ್ಳತನವಾಗಿದೆ. ಪೊಲೀಸರು 627 ಕೋಟಿ ರೂ. ವಾಪಸ್‌ ಪಡೆದಿದ್ದಾರೆ. ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ಹೆಚ್ಚಿದ್ದು, ಗೃಹ ಇಲಾಖೆ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿಲ್ಲ. ಡ್ರಗ್ಸ್‌ ಮಾಫಿಯಾ ಎಲ್ಲೆಡೆ ಅಧಿಕವಾಗಿದೆ. ಈ ಅಕ್ರಮ ಸರ್ಕಾರದ ಕೈ ಮೀರಿ ಹೋಗಿದೆ. ಒಂದು ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಬಾಟಲ್‌ ನೀರಿನಲ್ಲಿ ಮಾದಕ ವಸ್ತು ಬೆರೆಸಿ ಸೇವಿಸಿದ್ದಳು. ನಂತರ ಶಿಕ್ಷಕರಿಗೆ ವೆರಿ ಗುಡ್‌ ಎಂದು ಹೇಳುತ್ತಿದ್ದಳು, ವಿಚಾರಿಸಿ ನೋಡಿದಾಗ ಆಕೆ ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿದೆ. ಮಾದಕ ವಸ್ತು ಸೇವಿಸುವವರಲ್ಲಿ ಶಾಲೆಗಳ 15% ಮಕ್ಕಳು ಇದ್ದಾರೆ ಎಂಬುದು ಆಘಾತಕಾರಿ. ಚಾಕೋಲೇಟ್‌ ಮೂಲಕ ಮಾದಕ ವಸ್ತು ನೀಡಿ ಬಳಿಕ ಅವರನ್ನ ವ್ಯಸನಿಗಳಾಗಿ ಮಾಡುತ್ತಾರೆ. ರಾಜ್ಯಕ್ಕೆ 150 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಬರುತ್ತಿವೆ. ಪೊಲೀಸ್‌ ಇಲಾಖೆಯಲ್ಲಿ ಡ್ರಗ್ಸ್‌ ಜಾಲದೊಂದಿಗೆ ಇರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ವಿದೇಶದಿಂದ ವನ್ಯಜೀವಿಗಳನ್ನು ತಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಸಿಗದ ಅಪರೂಪದ ಕೋತಿ, ಹಕ್ಕಿಗಳನ್ನು ಇಲ್ಲಿಗೆ ತಂದು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆ ಪ್ರಾಣಿಗಳಿಗೆ ಯಾವ ರೋಗ ಇದೆ ಎಂದು ಗೊತ್ತಾಗುವುದಿಲ್ಲ. ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಕಾಂಬೋಡಿಯಾ ಮೊದಲಾದ ದೇಶಗಳಿಂದ ತರಲಾಗುತ್ತಿದೆ. ಆದರೆ ಪೊಲೀಸರು ಇಂತಹವರ ವಿರುದ್ಧ ಕ್ರಮ ವಹಿಸುತ್ತಿಲ್ಲ. ಕಾಂಗ್ರೆಸ್‌ನ ಎರಡು ವರ್ಷಗಳ ಆಡಳಿತದಲ್ಲಿ ಕಾನೂನು ಹಾಳಾಗಿದೆ. ಆದ್ದರಿಂದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಲಿ. ಈ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದರು.

Related Posts

Leave a Reply

Your email address will not be published. Required fields are marked *