Thursday, December 18, 2025
Menu

ನೀರಾವರಿ ಸಮಸ್ಯೆ: ಸಂಸತ್ತಿನಲ್ಲಿ ಯಾಕಿಲ್ಲ ಚರ್ಚೆ?

ಕೃಷ್ಣಾ, ಕಾವೇರಿ ಕಣಿವೆಯಲ್ಲಿ ಇಂದು ಹಲವು ಹತ್ತು ಸಮಸ್ಯೆಗಳು ತಾಂಡವವಾಡುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಕೇವಲ ರಾಜ್ಯ ಸರ್ಕಾರದಿಂದ ಇತ್ಯರ್ಥಗೊಳಿಸಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ದೇಶದ ಫೆಡರಲ್ ಸಿಸ್ಟಂ ಆಫ್ ಡೆಮಾಕ್ರಸಿ ಅಕ್ಷರಶಃ ಕಾರ್ಯ ನಿರ್ವಹಿಸಬೇಕಿದೆ.

ರಾಜ್ಯದ ನೀರಾವರಿ ಯೋಜನೆಗಳ ಕಷ್ಟ, ನಷ್ಟಗಳ ಬಗ್ಗೆ ಸಂಸತ್ತಿನಲ್ಲಿ ನಾಡಿನಿಂದ ಚುನಾಯಿತರಾಗುವ ಸಂಸದರು ಧ್ವನಿ ಎತ್ತುವುದು ವಿರಳವಾಗಿದೆ. ಅದರಲ್ಲಿಯೂ ಭಾರತೀಯ ಜನತಾ ಪಕ್ಷದಿಂದ ಚುನಾಯಿತರಾದ ಬಹುತೇಕ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಈ ಸಮಸ್ಯೆಗಳ ಉಸಾಬರಿಯೇ ಬೇಡ ಎಂದು ಸುಮ್ಮನಿರುವುದು ದುರದೃಷ್ಟಕರ. ಈ ಪೈಕಿ ನಾಡಿನ ಕೃಷ್ಣಾ ಮತ್ತು ಕಾವೇರಿ ಕಣಿವೆಯ ನೀರು ಮತ್ತು ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಇಳಿ ವಯಸಿನಲ್ಲಿಯೂ ಸಂಸತ್ತಿನಲ್ಲಿ ತಮ್ಮ ಧ್ವನಿ ಮೊಳಗಿಸಿರುವುದು ಮಾಜಿ ಪ್ರಧಾನಿ ದೇವೇಗೌಡರು. ಇವರೊಬ್ಬರನ್ನು ಹೊರತುಪಡಿಸಿದರೆ, ಇತರೆ ಸಂಸದರಿಗೆ ನಾಡಿನ ನೆಲ ಮತ್ತು ಜಲದ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ?

ಸೆಂಟ್ರಲ್ ಲಿಸ್ಟ್‌ನಲ್ಲಿರುವಂತಹ ಹಲವು ಹತ್ತು ವಿಷಯಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಲು ಸಂಸದರಿಗೆ ಸರ್ವ ಹಕ್ಕುಗಳಿವೆ. ಆದರೆ ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಇದು ಮಾರಕವಾಗಬಹುದೆಂಬ ಭಯ ಮತ್ತು ಆತಂಕದ ಪರಿಣಾಮವಾಗಿ ಇವರು ಹಿಂಜರಿಯುವುದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ. ಗೋವಾ ರಾಜ್ಯದ ಜೊತೆ ಜಟಿಲ ಕಗ್ಗಂಟಾದ ಮಹದಾಯಿ ನದಿ ನೀರು ಹಂಚಿಕೆ ಹಾಗೂ ಕಳಸಾ ಬಂಡೂರಿ ನಾಲೆ ನಿರ್ಮಾಣದ ವಿಚಾರದಲ್ಲಿ ಕಳೆದ ಮೂರು ದಶಕಗಳಿಂದಲೂ ತಲೆದೋರಿರುವ ತಕರಾರು ಕುರಿತು ರಾಜ್ಯದ ಉತ್ತರ ಕರ್ನಾಟಕ ಭಾಗದ ಸಂಸದರು ಇದುವರೆಗೂ ಅಧಿಕಾರಪೂರ್ವಕವಾದ ಚರ್ಚೆ ಮಾಡಿಲ್ಲ ಅಥವಾ ಪ್ರಶ್ನೆಯನ್ನು ಕೇಳಿಲ್ಲ. ವಿಪರ್ಯಾಸ ಎಂದರೆ ಕಳೆದ ಹದಿನೈದು, ಇಪ್ಪತ್ತು ವರ್ಷದಿಂದಲೂ ಈ ಭಾಗದಿಂದ ಲೋಕಸಭೆಗೆ ಚುನಾಯಿತರಾಗಿ ಬರುತ್ತಿರುವವರು ಬಿಜೆಪಿ ಪಕ್ಷದವರು. ಯೋಜನೆಗಳ ಅನುಷ್ಠಾನ ಮತ್ತು ಅವುಗಳ ಸಾಧಕ, ಬಾಧಕಗಳ ಬಗ್ಗೆ ಸಂಸತ್ತಿನಲ್ಲಿ ಈ ಭಾಗದ ಸಂಸದರಿಂದ ಕನಿಷ್ಟ ಧ್ವನಿ ಮತ್ತು ಚರ್ಚೆಯೂ ಇಲ್ಲ ಎಂದರೆ ಇದೆಂತಹ ಪ್ರಜಾತಂತ್ರ ಎಂದು ಪ್ರಶ್ನಿಸುವಂತಾಗುತ್ತದೆ.

ಕೃಷ್ಣಾ, ಕಾವೇರಿ ಕಣಿವೆಯಲ್ಲಿ ಇಂದು ಹಲವು ಹತ್ತು ಸಮಸ್ಯೆಗಳು ತಾಂಡವವಾಡುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಕೇವಲ ರಾಜ್ಯ ಸರ್ಕಾರದಿಂದ ಇತ್ಯರ್ಥಗೊಳಿಸಲು ಸಾಧ್ಯವಿಲ್ಲ . ಇಂತಹ ಸಮಯದಲ್ಲಿ ಫೆಡರಲ್ ಮಾದರಿಯ ಡೆಮಾಕ್ರೆಟಿಕ್ ಪದ್ಧತಿ ಅಕ್ಷರಶಃ ಕೆಲಸ ಮಾಡಬೇಕಿರುವುದು ಅನಿವಾರ್ಯ. ದೇಶದ ಸಂವಿಧಾನದ ಆಶಯಗಳು ವಾಸ್ತವಿಕವಾಗಿದೆ. ಆದರೆ ರಾಜ್ಯದ ಸಂಸದರು ಈ ವಾಸ್ತವಿಕ ಸಂಗತಿಗಳನ್ನು ಮುಂದಿಟ್ಟುಕೊಂಡು ಪ್ರಜಾಸದನದಲ್ಲಿ ಧ್ವನಿ ಎತ್ತದಿರುವುದು ಜನತೆಗೆ ಎಸಗುವ ಅನ್ಯಾಯ ಎನ್ನದೆ ವಿಧಿಯಿಲ್ಲ. ತುಂಗಾ ತಿರುವು ಯೋಜನೆ ಸಕಾರಗೊಂಡರೆ ಶಿವಮೊಗ್ಗ ಚಿತ್ರದುರ್ಗ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪ್ರಸಕ್ತ ತಲೆದೋರಿರುವ ಕುಡಿಯುವ ನೀರು ಮತ್ತು ನೀರಾವರಿ ಸಮಸ್ಯೆಗಳಿಗೆ ತುಸುಮಟ್ಟಿಗೆ ಪರಿಹಾರ ದೊರೆಯಬಹುದು.

ತುಂಗಭದ್ರಾ ನೀರು ಹಂಚಿಕೆ ವಿಚಾರದಲ್ಲಿಯೂ ಅಷ್ಟೆ. ಅಸಲಿಗೆ ಹೊಸಪೇಟೆಯಲ್ಲಿ ತುಂಗಭದ್ರಾ ಅಣೆಕಟ್ಟು ನಿರ್ಮಾಣವಾಗಿದ್ದರಿಂದ ರಾಜ್ಯದ ಜನತೆ ಮತ್ತು ಅನ್ನದಾತನಿಗೆ ಒದಗಿದ ಲಾಭವೇನೂ ಇಲ್ಲ! ಇಲ್ಲಿನ ಮುಕ್ಕಾಲು ಪಾಲು ನೀರೆಲ್ಲವೂ ಇಂದು ಬಳಕೆಯಾಗಿರುವುದು ಆಂಧ್ರ ಪದೇಶಕ್ಕೆ ! ಈ ಎಲ್ಲ ಸಮಸ್ಯೆಗಳ ಚರ್ಚೆಗೆ ಪರಿಹಾರ ಒದಗಿಸುವುದೇ ದೇಶದ ಸಂಸತ್ತು. ಈ ಮಾತನ್ನು ನಾಡಿನ ಸಂಸದರು ಮರೆಯುವಂತಿಲ್ಲ.

Related Posts

Leave a Reply

Your email address will not be published. Required fields are marked *