Wednesday, December 17, 2025
Menu

ಬೆಳೆ ಸಮೀಕ್ಷೆ ವ್ಯತ್ಯಾಸ, ಆಕ್ಷೇಪ ಸಲ್ಲಿಸಲು ರೈತರಿಗೆ ಅವಕಾಶ: ಕೃಷಿ ಸಚಿವ ಚಲುವರಾಯಸ್ವಾಮಿ

ಬೆಳಗಾವಿ, ಸುವರ್ಣ ವಿಧಾನಸೌಧ: ಕೃಷಿ ಜಮೀನುಗಳಲ್ಲಿ ಬೆಳೆ ಸಮೀಕ್ಷೆಯನ್ನು ಸ್ವತಃ ರೈತರೇ ಬೆಳೆ ಸಮೀಕ್ಷೆ ರೈತರ ಆ್ಯಪ್ ನಲ್ಲಿ ಬೆಳೆ ಮಾಹಿತಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ವ್ಯತ್ಯಾಸಗಳು ಕಂಡು ಬಂದಲ್ಲಿ ರೈತರು ನಿಗದಿತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜಿ. ಎಚ್. ಶ್ರೀನಿವಾಸ್ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿದರು.

ರಾಜ್ಯದ ಎಲ್ಲ ರೈತರ ತಾಕುಗಳ ಬೆಳೆ ಮಾಹಿತಿ ದಾಖಲಿಸುವ ಸಲುವಾಗಿ ಆದ್ಯತೆ ಮೇರೆಗೆ ಪ್ರಥಮವಾಗಿ ಸ್ವತಃ ರೈತರು ಬೆಳೆ ಸಮೀಕ್ಷೆ ರೈತರ ಆ್ಯಪ್ ನಲ್ಲಿ ಬೆಳೆ ಮಾಹಿತಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಸಕಾಲದಲ್ಲಿ ರೈತರು ಬೆಳೆ ಸಮೀಕ್ಷೆ ಮಾಡದೇ ಇದ್ದಲ್ಲಿ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಖಾಸಗಿ ನಿವಾಸಿಗಳ ಬದಲಿಗೆ ಸಂಘ ಸಂಸ್ಥೆಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಸಲು ಅವಕಾಶ ಕಲ್ಪಿಸಿಲ್ಲ. ಬೆಳೆ ಮಾಹಿತಿ ಕುರಿತಂತೆ ಯಾವುದೇ ವ್ಯತ್ಯಾಸಗಳು ಕಂಡು ಬಂದಲ್ಲಿ ರೈತರು ನಿಗದಿತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ರಾಜ್ಯದಲ್ಲಿ ಪ್ರತಿ ವರ್ಷ 4.40 ಕೋಟಿ ತಾಕುಗಳ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಸುಮಾರು 2 ಲಕ್ಷ ಆಕ್ಷೇಪಣೆಗಳೂ ಕೂಡ ಸಲ್ಲಿಕೆ ಆಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಮರು ಸಮೀಕ್ಷೆ ಮಾಡಿಸಿದ್ದೇವೆ. ಅಧಿಕಾರಿ, ಸಿಬ್ಬಂದಿ ಎಲ್ಲಿಯೋ ಕುಳಿತು ಬೆಳೆ ಸಮೀಕ್ಷೆ ಮಾಡಲು ಅವಕಾಶ ಇರಲ್ಲ ಎಂದರು.

ಅರಣ್ಯ ಹಾಗೂ ಅಭಯಾರಣ್ಯ ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿಲ್ಲ. ಅಭಯಾರಣ್ಯ ಪ್ರದೇಶಗಳ ಅಂಚಿನ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ತೊಂದರೆ ಆಗುತ್ತಿರುವ ಕುರಿತಂತೆ ಯಾವುದೇ ದೂರು ಸಲ್ಲಿಕೆ ಆಗಿಲ್ಲ. ರೈತರೇ ಸ್ವತಃ ಬೆಳೆ ಸಮೀಕ್ಷೆಗೆ ಅವಕಾಶ ಕಲ್ಪಿಸಿರುವುದರಿಂದ ಈ ಸಮಸ್ಯೆ ಉದ್ಭವಿಸಿಲ್ಲ ಎಂದರು.

ಮಲೆನಾಡು ಪ್ರದೇಶದ ಕೆಲವೆಡೆ ನೆಟ್ ವರ್ಕ್ ಸಮಸ್ಯೆಯಿಂದಾಗಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಷ್ಟಕರವಾಗಿದೆ, ಹೀಗಾಗಿ ಮ್ಯಾನುವಲ್ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಲಹೆ ನೀಡಿದರು. ಇದೀಗ ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿಯೂ ನೆಟ್ ವರ್ಕ್ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

1,250 ಕೋಟಿ ರೂ. ವೆಚ್ಚದ ಕೃಷಿ ಸಲಕರಣೆ

ಎರಡೂವರೆ ವರ್ಷಗಳಲ್ಲಿ ರಾಜ್ಯದ 3.20 ಲಕ್ಷ ರೈತರಿಗೆ ಅಂದಾಜು 1,250 ಕೋಟಿ ರೂಪಾಯಿ ಮೊತ್ತದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವಿಧಾನಸಭೆಯ ಪ್ರಶ್ನೋತ್ತರ ವೇಳೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ನೀಲಪ್ಪ ಶಿವಣ್ಣನವರ್ ಅವರ ಪ್ರಶ್ನೆಗೆ ಉತ್ತರ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಂಡುಬರುತ್ತಿದೆ. ಹೀಗಾಗಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಯಂತ್ರೋಪಕರಣಗಳನ್ನು ಬಳಸುವ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಸರ್ಕಾರ ರೈತರ ಬೇಡಿಕೆಗಳಿಗೆ ಅನುಗುಣವಾಗಿ ಕೃಷಿ ಯಂತ್ರೋಪಕರಣ ವಿತರಿಸುವ ಕೆಲಸಕ್ಕೆ ಆದ್ಯತೆ ನೀಡಿದೆ. ಎರಡೂವರೆ ವರ್ಷಗಳಲ್ಲಿ ರಾಜ್ಯದ 3.20 ಲಕ್ಷ ರೈತರಿಗೆ ಅಂದಾಜು 1,250 ಕೋಟಿ ರೂ. ಮೊತ್ತದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಅಲ್ಲದೆ ಹೈಟೆಕ್ ಹಾರ್ವೆಸ್ಟ್ ಹಬ್ ಕಾರ್ಯಕ್ರಮದಡಿ 127 ಕೋಟಿ ರೂ. ವೆಚ್ಚದಲ್ಲಿ 348 ರೈತರಿಗೆ ಉಪಯುಕ್ತ ಕೃಷಿ ಯಂತ್ರೋಪಕರಣ ವಿತರಿಸಲಾಗಿದೆ ಎಂದರು.

ಪ್ರಸಕ್ತ ವರ್ಷ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ ಒಟ್ಟು 428.82 ಕೋಟಿ ರೂ. ಗಳ ಅನುದಾನ ಮೀಸಲಿಟ್ಟಿದ್ದು, ಈಗಾಗಲೆ 319.57 ಕೋಟಿ ರೂ. ಅನುದಾನ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಈವರೆಗೆ 69722 ರೈತರಿಗೆ 271.71 ಕೋಟಿ ರೂ. ಗಳ ಸಹಾಯಧನ ಒದಗಿಸಲಾಗಿದೆ. ಕೃಷಿ ಯಂತ್ರೋಪಕರಣಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಕೇಂದ್ರ ಸರ್ಕಾರಕ್ಕೂ ಹೆಚ್ಚಿನ ಅನುದಾನ ಒದಗಿಸಲು ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.

Related Posts

Leave a Reply

Your email address will not be published. Required fields are marked *