ಬೆಳಗಾವಿ: ಚುನಾವಣೆ ಎದುರಿಸಲು ಯಾರು ಯಾರು ರಾಜೀನಾಮೆ ನೀಡ್ತೀರಿ ಒಮ್ಮೆ ಕೈ ಎತ್ತಿ, ಇಲ್ಲವೇ ರಾಜೀನಾಮೆ ಪತ್ರ ಕೊಡಿ, ಅಂಗೀಕಾರ ಮಾಡ್ತೇನಿ ಎಂದು ಬುಧವಾರ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸ್ವಾರಸ್ಯಕರವಾಗಿ ಹೇಳಿದ ಘಟನೆ ನಡೆಯಿತು.
ಬಿಜೆಪಿ ನಾಯಕರು ಸ್ಪೀಕರ್ ಮೊಗಸಾಲೆಗೆ ಬಂದು ಧರಣಿ ಕುಳಿತರು, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅವರೂ ಕೂಡಲೇ ರಾಜ್ಯದ 1.26 ಕೋಟಿ ಮಹಿಳೆಯರ ಕ್ಷಮೆ ಕೇಳಬೇಕು. ಯಾವ ಕಾರಣಕ್ಕೆ ಫೆಬ್ರುವರಿ ಹಾಗೂ ಮಾರ್ಚ್ ಕಂತಿನ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದು ಬಾವಿಯಲ್ಲಿಯೇ ಆಕ್ರೋಶ ಹೊರಹಾಕಿದರು.
ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ನಡುವೆ ವಾಗ್ವಾದ ನಡೆದು, ಮಾತಿಗೆ ಮಾತು ಬೆಳೆಯಿತು. ಬಿಜೆಪಿ ನಾಯಕರು ನಿಮ್ಮ ಗ್ಯಾರಂಟಿ ಮುಂದಿಟ್ಟು ಚುನಾವಣೆಗೆ ಬನ್ನಿ ಎಂದು ಪಂಥ್ವಾಹಾನ ನೀಡಿದರು. ಈ ವೇಳೆ ಕೆರಳಿದ ಎರಡು ಪಕ್ಷದ ಸದಸ್ಯರು ರಾಜೀನಾಮೆ ನೀಡಿ ಚುನಾವಣೆ ಎದುರಿಸೋಣ ಎಂದು ಕೂಗಾಟ ನಡೆಸಿದರು.
ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರು ರಾಜೀನಾಮೆ ನೀಡುವವರು ಈಗಲೇ ರಾಜೀನಾಮೆ ಪತ್ರ ಕೊಡಿ, ಅಂಗೀಕಾರ ಮಾಡಿ ಈಗಲೇ ರಾಜ್ಯಪಾಲರಿಗೆ ಕಳುಹಿಸಿಕೊಡುತ್ತೇನೆ. ಚುನಾವಣೆ ಎದುರಿಸಿ ಎಂದರು. ಕೂಡಲೇ ಸದನದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಕೈ ಎತ್ತುವುದಿರಲಿ ಎಲ್ಲರೂ ಗಪ್ ಚುಪ್ ಆದರು.
ಎತ್ತರ ಖುರ್ಚಿ ಹಾಕಿ ಪಾಟೀಲ ಲೇವಡಿ
ಗೃಹಲಕ್ಷ್ಮಿ ಗಲಾಟೆ ನಡೆಯುವ ವೇಳೆ ಸ್ಪೀಕರ್ ಖಾದರ್ ಅವರು ಎಷ್ಟೇ ಸೂಚನೆ ನೀಡಿದರು ಸುಮ್ಮನಾಗದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿರೋಧ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಸಿ.ಸಿ. ಪಾಟೀಲ್ ಅವರು ಅಧ್ಯಕ್ಷರೇ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಿಮಗಿಂತಲೂ ಎತ್ತರದ ಖುರ್ಚಿ ಹಾಕಬೇಕು ಎಂದು ಸ್ವಾರಸ್ಯದ ಮಾತನಾಡಿದರು.


