ಬೆಳಗಾವಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿನ 15 ವರ್ಷ ಮೀರಿದ ವಾಹನಗಳಿಗೆ ಒಂದು ವರ್ಷ ವಿಸ್ತರಣೆಯ ಜೊತೆಗೆ, ಸುಸ್ಥಿತಿಯಲ್ಲಿರುವ ಕೆಲ ವಾಹನಗಳಿಗೆ ಗುಜರಿ ನೀತಿಯಡಿ ವಿನಾಯಿತಿ ನೀಡಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬುಧವಾರ ಜೆಡಿಎಸ್ ನ ಸದಸ್ಯ ಗೋವಿಂದರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ಇಲಾಖೆ ಒಳಗೊಂಡಂತೆ ವಿವಿಧ ಇಲಾಖೆಯಲ್ಲಿ 15 ವರ್ಷ ಮೀರಿದ ಸುಮಾರು 4 ಸಾವಿರ ವಾಹನಗಳಿವೆ ಎಂದು ಹೇಳಿದರು.
ನೆರೆ ರಾಜ್ಯ ತಮಿಳುನಾಡಿನಲ್ಲಿ 15 ವರ್ಷಕ್ಕೂ ಮೀರಿ ಹಾಗೂ ಸುಸ್ಥಿತಿಯಲ್ಲಿರುವ ವಾಹನಗಳಿಗೆ ಒಂದು ವರ್ಷ ಕೇಂದ್ರವು ವಿನಾಯಿತಿ ನೀಡಿರುವ ಮಾಹಿತಿಯಿದೆ. ಹೀಗಾಗಿ, ಸರ್ಕಾರಿ ಇಲಾಖೆಗಳ ವಾಹನಗಳಿಗೂ ಒಂದು ವರ್ಷ ವಿಸ್ತರಣೆ ಜೊತೆಗೆ ಸುಸ್ಥಿತಿಯಲ್ಲಿರುವ ವಾಹನಗಳಿಗೆ ನಿಯಮದಿಂದ ವಿನಾಯಿತಿ ನೀಡಬೇಕೆಂದು ಪತ್ರ ಬರೆಯಲಾಗಿದೆ ಎಂದರು.
ರಾಜ್ಯ ಸಾರಿಗೆ ಸಂಸ್ಥೆಯಲ್ಲಿ 15 ವರ್ಷಕ್ಕೂ ಮೀರಿ ಯಾವ ವಾಹನಗಳಿಲ್ಲ. ಸದ್ಯ 5,800 ಬಸ್ಗಳು ಒಡಾಡುತ್ತಿದೆ. ಈ ವರ್ಷ 2 ಸಾವಿರ ಬಸ್ಗಳು ಕಾರ್ಯಾಚರಣೆಗೆ ಸೇರ್ಪಡೆಯಾಗಲಿವೆ. ಪರಿಸರಸ್ನೇಹಿ ಹಾಗೂ ಮಾಲಿನ್ಯ ಮುಕ್ತ ಮಾಡಲು ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ 1,700 ಎಲೆಕ್ಟ್ರಿಕಲ್ ಬಸ್ಗಳು ಕಾರ್ಯಾಚರಿಸುತ್ತಿವೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದರಾಜು, ರಾಜ್ಯದಲ್ಲಿ 15 ವರ್ಷಕ್ಕೂ ಮೀರಿ 1.04 ಕೋಟಿ ವಾಹನಗಳು ಸಂಚಾರ ನಡೆಸುತ್ತಿವೆ. ಬೆಂಗಳೂರಿನಲ್ಲಿ 37 ಲಕ್ಷ ವಾಹನಗಳಿವೆ. 4 ಸಾವಿರ ವಾಹನಗಳು ಸರ್ಕಾರದ ವಿವಿಧ ಇಲಾಖೆಗಳ ವಾಹನಗಳೇ ಆಗಿವೆ. ಸರಾಸರಿ ಪ್ರತಿ ಮೂರು ವಾಹನಗಳಲ್ಲಿ ಒಂದು ವಾಹನ ಅವಧಿ ಮೀರಿದೆ ಎಂದು ಅಂಕಿ-ಅಂಶ ಸಮೇತ ಹೇಳಿದರು.
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನ ಸಂಸ್ಥೆಗಳಿಗೆ ಸೇರಿದ ನೋಂದಣಿಯಾಗಿ 15 ವರ್ಷ ಮೀರಿದ ವಾಹನಗಳನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಸ್ಥಾಪಿತವಾಗಿರುವ ರಿಜಿಸ್ಟರ್ಡ್ ವೆಹಿಕಲ್ ಸ್ಕ್ರ್ಯಾಪಿಂಗ್ ಫ್ಯಾಸಿಲಿಟಿ (ಆರ್ವಿಎಸ್ಎಫ್)ಗಳಲ್ಲಿಯೇ ಸ್ಕ್ರ್ಯಾಪ್ ಮಾಡಲು ರಾಜ್ಯ ಸರ್ಕಾರವು ಕಳೆದ ಸೆಪ್ಟೆಂಬರ್ 12ರಂದು ಅನುಮೋದನೆ ನೀಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ಡಿಸೆಂಬರ್ 4ರ ಅಂತ್ಯಕ್ಕೆ ಒಟ್ಟು 18,552 15 ವರ್ಷಗಳು ಮೀರಿದ ಸಾರಿಗೆ ಸಂಸ್ಥೆಗಳ ಬಸ್ಗಳನ್ನು ಹೊರತುಪಡಿಸಿ, ಸರ್ಕಾರಿ ವಾಹನಗಳ ನೋಂದಣಿಯನ್ನು ಕೇಂದ್ರ ಸರ್ಕಾರವು ವಾಹನ ಪೋರ್ಟಲ್ನಲ್ಲಿ ರದ್ದುಪಡಿಸಿದೆ. ಈ 18,552 ವಾಹನಗಳ ಪೈಕಿ ಆರ್ವಿಎಸ್ಎಫ್ನಲ್ಲಿ ಒಟ್ಟು 1,493 ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ ಮತ್ತು 17,059 ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದು ಬಾಕಿಯಿದೆ ಎಂದರು.
2023ರಿಂದ ಇಲ್ಲಿಯವರೆಗೆ ರಾಜ್ಯದ ನಾಲ್ಕು ನಿಗಮ ಸಂಸ್ಥೆಗಳಲ್ಲಿ 3,212 ವಾಹನಗಳು ನಿಷ್ಕ್ರಿಯಗೊಂಡಿವೆ. 579 ವಾಹನಗಳನ್ನು ನಿಷ್ಕ್ರಿಯಗೊಳಿಸಲು ಬಾಕಿ ಇದೆ ಎಂದು ಸಚಿವರು ವಿವರಿಸಿದರು.


