ಗೃಹಲಕ್ಷ್ಮೀ ಹಣ ಬಿಡುಗಡೆ ಕುರಿತು ನೀಡಿದ ಮಾಹಿತಿ ತಪ್ಪಾಗಿದ್ದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಷಾದ ವ್ಯಕ್ತಪಡಿಸಿದ ನಂತರವೂ ಸುಮ್ಮನಾಗದ ವಿಪಕ್ಷ ಸದಸ್ಯರು ಕಲಾಪ ಬಹಿಷ್ಕರಿಸಿ ಸಭಾತ್ಯಾಗ ಮಾಡಿದ ಘಟನೆ ಬುಧವಾರ ನಡೆಯಿತು.
ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು.
ಎರಡು ತಿಂಗಳ ಕಂತು ಬಿಡುಗಡೆ ಬಗ್ಗೆ ಸಚಿವರು ತಪ್ಪು ಉತ್ತರ ಕೊಟ್ಟಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಆರ್.ಅಶೋಕ್ ಸದನದಲ್ಲಿ ಆಗ್ರಹಿಸಿದರು. ವಿಪಕ್ಷದವರ ಮನವೊಲಿಸಲು ಸ್ಪೀಕರ್ ಪ್ರಯತ್ನಿಸಿದರು. ಆದರೆ, ಕ್ಷಮೆಯಾಚನೆಗೆ ಬಿಜೆಪಿ ನಾಯಕರು ಪಟ್ಟು ಹಿಡಿದರು
ಈ ವೇಳೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, 54 ಸಾವಿರ ರೂ. ಪ್ರತಿ ಮಹಿಳೆಯರಿಗೆ ಹಾಕಿದ್ದೀವಿ. ನಾನು ವಿಷಾದ ವ್ಯಕ್ತಪಡಿಸ್ತೇನೆ ಅಂತ ಹೇಳಿದ್ದೇನೆ. ಆ ಪದ ಸುರೇಶ್ ಕುಮಾರ್ ಅವರಿಗೆ ಇಷ್ಟ ಆಗದಿದ್ರೆ ಕ್ಷಮೆ ಕೇಳ್ತೇನೆ. ಆದರೆ, ನಾನು ಒಬ್ಬ ಮಹಿಳೆ ಅಂತ ಈ ಮಟ್ಟಕ್ಕೆ ನೀವು ಮಾತಾಡ್ತಿರೋದು ಸರಿಯಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ನಾನು ಮಹಿಳೆ ಅಂತ ನೀವು ಕ್ಷಮೆ ಕೇಳಿಸಲು ಮುಂದಾಗಿದ್ದೀರ ಅಂತ ಬಿಜೆಪಿ ಸದಸ್ಯರಿಗೆ ಹೆಬ್ಬಾಳ್ಕರ್ ಕೌಂಟರ್ ಕೊಟ್ಟರು. ಆಗ ಹೆಬ್ಬಾಳ್ಕರ್ ನೆರವಿಗೆ ಸಚಿವರು ನಿಂತರು.
ಅಶೋಕ್ ಮಾತನಾಡಿ, ಇಲ್ಲಿ ವಿಷಯಾಂತರ ಆಗ್ತಿದೆ. ಮಹಿಳೆ ಪುರುಷರಷ್ಟೇ ಸಮ. ಮಹಿಳೆ ಪುರುಷ ಅಂತ ರೂಲ್‌ಬುಕ್‌ನಲ್ಲಿ ಇಲ್ಲ. ಮಂತ್ರಿ ಅಂತ ಇದೆ. ಮಂತ್ರಿಗಳ ಉತ್ತರ ನಾವು ಒಪ್ಪಲ್ಲ. ಎರಡು ತಿಂಗಳ ಕಂತು ಯಾವಾಗ ಕೊಡ್ತೀವಿ ಅಂತ ಹೇಳಿಲ್ಲ, ನಾವು ವಾಕೌಟ್ ಮಾಡ್ತೇವೆ ಎಂದು ಎಚ್ಚರಿಸಿದರು. ಸದಸ್ಯರ ಮನವೊಲಿಸಲು ಸ್ಪೀಕರ್ ಪ್ರಯತ್ನಿಸಿದರು. ಕೊನೆಗೆ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.


