ಧರ್ಮಸ್ಥಳ ಎಂಬ ಊರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಆರೋಪಿಗಳು ಸಿಗುತ್ತಿಲ್ಲ ಅಂದರೆ ಕೊಂದವರು ಯಾರು ಎಂದು ಮಹಿಳಾ ನಾಯಕಿ ಮಲ್ಲಿಗೆ ಪ್ರಶ್ನಿಸಿದ್ದಾರೆ. ನೊಂದವರಿಗೆ ನ್ಯಾಯ ದೊರೆಯುವ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಸಾಹಿತಿ ರೋಹಿಣಿ ಮಾತನಾಡಿ, ಈ ನೆಲದಲ್ಲಿ ಮಹಿಳೆಯರ ನೋವಿನ ಅಳು ಕೇಳಿಸುತ್ತಿದೆ. ನಾವು ಅವರಿಗೆ ನ್ಯಾಯ ಕೊಡಿಸಲು ಬಂದಿದ್ದೇವೆ. ಕೊಲೆ ಮಾಡಿದವರು ಯಾರು ಎಂಬುದು ತನಿಖೆಯಾಗಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು.
ಮಹಿಳಾ ನ್ಯಾಯ ಸಮಾವೇಶದ ಅಂಗವಾಗಿ ಬೆಳ್ತಂಗಡಿ ಮಾರಿಗುಡಿಯಿಂದ ಮಿನಿ ವಿಧಾನ ಸೌಧದವರೆಗೆ ನೂರಾರು ಮಹಿಳೆಯರ ಮೌನ ಮೆರವಣಿಗೆ ನಡೆಯಿತು. ರಾಜ್ಯದ ನಾನಾ ಭಾಗಗಳಿಂದ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು ಎಲ್ಲ ಶೋಷಿತ, ದಮನಿತ ಮಹಿಳೆಯರಿಗೆ ನ್ಯಾಯ ಖಾತ್ರಿಪಡಿಸುವಂತೆ ಆಗ್ರಹಿಸಿ “ನಿರ್ಭಯಾ ದಿನ”ವಾದ ಇಂದು ಧರ್ಮಸ್ಥಳದ ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ’ ನಡೆಯಿತು.
ಮಹಿಳಾ ಹೋರಾಟಗಾರ್ತಿಯರು, ಬರಹಗಾರರಾದ ಡಾ.ವಸುಂಧರಾ ಭೂಪತಿ, ಡಾ. ದು ಸರಸ್ವತಿ, ಇಂದಿರಾ ಕೃಷ್ಣಪ್ಪ, ಡಾ. ಕೆ.ಶರೀಫಾ, ಡಾ.ಎನ್ ಗಾಯತ್ರಿ, ಚಂಪಾವತಿ, ಗೌರಮ್ಮ, ಮೀನಾಕ್ಷಿ, ಇಂದ್ರಮ್ಮ, ಜ್ಯೋತಿ ಎ., ಕೆ.ಎಸ್. ವಿಮಲಾ, ಶಾಂತಮ್ಮ, ಮಧು ಭೂಷಣ್, ಮಮತಾ ಯಜಮಾನ್, ಗೌರಿ, ಗೀತಾ ಸಾಧನಾ, ವೀಣಾ ಹರಿಗೋವಿಂದ್, ಮಲ್ಲಿಗೆ ಸಿರಿಮನೆ, ಸುಷ್ಮಾ ವರ್ಮಾ ಮತ್ತಿತರರು ಭಾಗವಹಿಸಿದ್ದರು.
ಕೊಂದವರು ಯಾರು ಎಂಬ ಪ್ರಶ್ನೆ ಮುಂದಿಟ್ಟು ಈ ಹಿಂದೆ ಮಹಿಳಾ ಹೋರಾಟಗಾರರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ವೇದಾವತಿ, ಸೌಜನ್ಯಾ ಮತ್ತು ಪದ್ಮಲತಾ ಸಾವಿನ ತನಿಖೆಗೆ ಆಗ್ರಹಿಸಿ, ಉಗ್ರಪ್ಪ ಸಮಿತಿ ವರದಿಯನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.


