ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಚುನಾವಣಾ ತಂತ್ರಗಾರ ಹಾಗೂ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಬಿಹಾರ ಚುನಾವಣೆ ನಂತರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಪ್ರಿಯಾಂಕಾ ಗಾಂಧಿ ಮತ್ತು ಪ್ರಶಾಂತ್ ಕಿಶೋರ್ ಮೂರು ವರ್ಷದ ಬಳಿಕ ಮಾತುಕತೆ ನಡೆಸಿದ್ದು ಮತ್ತೆ ಕಾಂಗ್ರೆಸ್ ಪರ ಪಿಕೆ ರಣತಂತ್ರ ರೂಪಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಬಿಹಾರ ಚುನಾವಣೆ ನಡೆದ ಒಂದು ತಿಂಗಳ ನಂತರ ಈ ಮಹತ್ವದ ಭೇಟಿ ನಡೆದಿದೆ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಟೀಕೆ ಮಾಡಿದ್ದ ಪ್ರಶಾಂತ್ ಕಿಶೋರ್ ಈಗ ಪ್ರಿಯಾಂಕಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದು ಯಾವ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನುವುದು ತಿಳಿದುಬಂದಿಲ್ಲ.
ಬಿಹಾರ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ರಾಹುಲ್ ಗಾಂಧಿಯವರ ಮತ ಕಳ್ಳತನ ಅಭಿಯಾನ ರಾಜ್ಯದ ಜನತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದರು.
ಹಾಗೆ ನೋಡಿದರೆ ಈ ಹಿಂದೆ ಪ್ರಶಾಂತ್ ಕಿಶೋರ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಆದರೆ ಇವರ ಸಲಹೆಗಳು ಕಾಂಗ್ರೆಸ್ ಹಿರಿಯ ನಾಯಕರಿಗೆ ಹಿಡಿಸದ ಕಾರಣ ಇವರ ವಿರುದ್ಧ ಮಾತುಗಳು ಕೇಳಿ ಬಂದಿತ್ತು.
ಏಪ್ರಿಲ್ 2022 ರಲ್ಲಿ ಸೋನಿಯಾ ಗಾಂಧಿಯವರ 10, ಜನಪಥ್ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷವನ್ನು ಮತ್ತೆ ಸಂಘಟಿಸುವುದು ಹೇಗೆ ಎನ್ನುವುದರ ಬಗ್ಗೆ ವಿವರವಾದ ವಿವರಣೆ ನೀಡಿದ್ದರು. ಈ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಮತ್ತು ಅನೇಕ ಹಿರಿಯ ನಾಯಕರು ಹಾಜರಿದ್ದರು. ನಂತರ ಸೋನಿಯಾ ಅವರ ಪ್ರಸ್ತಾಪಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ಸ್ಥಾಪಿಸಲು ನಿರ್ಧರಿಸಿದರು. ಈ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಲು ಆರಂಭಿಸಿತ್ತು.


