Menu

ದೆಹಲಿಯಲ್ಲಿ ಆವರಿಸಿರುವ ಮಂಜು, ಹೊಗೆ: ವಿಮಾನದಲ್ಲೇ ಲಾಕ್‌ ಆದ ರಾಜ್ಯದ ಜನಪ್ರತಿನಿಧಿಗಳು

ಚಳಿಗಾಲಕ್ಕೆ ತತ್ತರಿಸಿರುವ ದೆಹಲಿಯಲ್ಲಿ ದಟ್ಟವಾದ ಮಂಜು, ಹೊಗೆ ಆವರಿಸಿದ್ದು, ವಿಮಾನಗಳ ಹಾರಾಟ ವ್ಯತ್ಯಗೊಂಡಿದೆ. ಹೀಗಾಗಿ ಕರ್ನಾಟಕದ 21 ಶಾಸಕರು ಇಂಡಿಗೋ ವಿಮಾನದ ಒಳಗಡೆಯೇ ಸಿಲುಕಿಕೊಂಡಿದ್ದಾರೆ.

ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ವೋಟ್‌ ಚೋರಿ ವಿರುದ್ಧ ಪ್ರತಿಭಟನಾ ಸಮಾವೇಶಕ್ಕೆ ಮಂತ್ರಿಗಳು, ಕಾಂಗ್ರೆಸ್ ಶಾಸಕರು ಆಗಮಿಸಿದ್ದರು. ಸೋಮವಾರವಾದ ಇಂದು ದಾವಣಗೆರೆಯಲ್ಲಿ ನಡೆಯಲಿರುವ ಶಾಮನೂರು ಶಿವ ಶಂಕರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೆಹಲಿಯಿಂದ) ಬೆಳಗಾವಿಗೆ ಹೋಗುವ ವಿಮಾನ ಏರಿದ್ದಾರೆ. ಈ ವಿಮಾನ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು, ಆದರೆ ಮುಸುಕಿರುವ ಮಂಜು, ದಟ್ಟ ಹೊಗೆಯಿಂದಾಗಿ ಒಳಗಡೆ ಪ್ರಯಾಣಿಕರಿದ್ದರೂ ವಿಮಾನ ಟೇಕಾಫ್‌ ಆಗಿಲ್ಲ.

ಕೆಲವು ಗಂಟೆಗಳಿಂದ ಶಾಸಕರು ವಿಮಾನದಲ್ಲೇ ಕುಳಿತ್ತಿದ್ದು ವಿಮಾನ ಎಷ್ಟು ಗಂಟೆಗೆ ಟೇಕಾಫ್‌ ಆಗಲಿದೆ ಎಂಬ ಮಾಹಿತಿಯನ್ನು ಸಿಬ್ಬಂದಿ ನೀಡಿಲ್ಲ. ದೆಹಲಿಯಲ್ಲಿ ಹವಾಮಾನ ವೈಪರೀತ್ಯವು ತೀವ್ರಗೊಂಡು ವಿಮಾನಗಳ ಟೇಕಾಫ್‌ ಮತ್ತು ಲ್ಯಾಂಡಿಂಗ್‌ಗೆ ತೊಡಕುಂಟಾಗಿದೆ.

ಶಾಸಕ, ಸಚಿವರಾದ ಕೋನರೆಡ್ಡಿ,  ಬಸನಗೌಡ ಬಾದರ್ಲಿ, ಆನಂದ್ ಗಡದೇವರಮಠ, ಹೆಚ್‌ಕೆ ಪಾಟೀಲ್, ಲಕ್ಷ್ಮೀ ಹೆಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ರಾಜು ಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಸತೀಶ್ ಜಾರಕಿಹೊಳಿ, ಜಿ ಎಸ್ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಈಶ್ವರ್ ಖಂಡ್ರೆ, ಜೆ ಟಿ ಪಾಟೀಲ್, ತಿಪ್ಪಣ್ಣ ಕಾಮಕನೂರ್, ನಾಗೇಂದ್ರ, ಎಂ ಬಿ ಪಾಟೀಲ್, ಅಲ್ಲಮಪ್ರಭು, ರೆಹಮಾನ್ ಖಾನ್, ಕೆಜೆ ಜಾರ್ಜ್ ವಿಮಾನದೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೋರ್ಡಾನ್, ಇಥಿಯೋಪಿಯಾ ಹಾಗೂ ಓಮನ್ ದೇಶಗಳ ಪ್ರವಾಸಕ್ಕೆ ಹೊರಟಿದ್ದು, ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ವಿಳಂಬವಾಗಿದೆ. ದೆಹಲಿ ವಿಮಾನ ನಿಲ್ದಾಣದ ಸುತ್ತಮುತ್ತ ದಟ್ಟವಾದ ಮಂಜು ಆವರಿಸಿದ್ದರಿಂದ ನಿಗದಿತ ಸಮಯಕ್ಕೆ ಪ್ರಯಾಣ ಆರಂಭವಾಗಿಲ್ಲ. ಬೆಳಗಿನ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

Related Posts

Leave a Reply

Your email address will not be published. Required fields are marked *