ತುರುವೇಕೆರೆ ತಾಲೂಕಿನ ಅರೆಹಳ್ಳಿಯಲ್ಲಿರುವ ಬಸವೇಶ್ವರ ಸ್ವಾಮಿಯ ಕತ್ತು ಅಲಂಕರಿಸಿದ್ದ 500 ಗ್ರಾಂ ತೂಕದ ಬೆಳ್ಳಿಯ ಸರ ಮತ್ತು ದೇವಾಲಯದ ಹುಂಡಿಯಲ್ಲಿದ್ದ 10 ಸಾವಿರರೂಪಾಯಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಅರೆಹಳ್ಳಿ ಗ್ರಾಮ ದೇವರಾಗಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಅರ್ಚಕರಾಗಿರುವ ರುದ್ರೇಶ್ ಬೆಳಗ್ಗೆ ಪೂಜೆಗಾಗಿ ದೇವಾಲಯಕ್ಕೆ ತೆರಳಿದ್ದರು. ದೇವಾಲಯದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಯಾರೋ ಒಡೆದಿದ್ದು ಗಮನಿಸಿ ಗಾಬರಿಯಾಗಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದರು. ಗ್ರಾಮಸ್ಥರು ದೇವಾಲಯದ ಒಳಗೆ ಬಂದು ನೋಡಬೇಕಾದರೆ ಬಸವೇಶ್ವರ ಸ್ವಾಮಿಯ ಕತ್ತಿಗೆ ಹಾಕಲಾಗಿದ್ದ ಬೆಳ್ಳಿಯ ಸರ ಮತ್ತು ದೇವಾಲಯದ ಒಳಗಿದ್ದ ಹುಂಡಿ ಹಣವನ್ನು ಕಳ್ಳರು ಎಗರಿಸಿರುವುದು ಗೊತ್ತಾಗಿದೆ. ತುರುವೇಕೆರೆ ಪೊಲೀಸ್ ಠಾಣೆಗೆ ಅರ್ಚಕ ರುದ್ರೇಶ್ ದೂರು ಸಲ್ಲಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಲೋಹಿತ್ ಮತ್ತು ಪಿಎಸೈ ಮೂರ್ತಿ ಭೇಟಿ ನೀಡಿ, ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗ್ರಾಮದ ಮುಖಂಡರಾದ ಪ್ರಕಾಶ್, ರಾಜಕುಮಾರ್, ಜಗದೀಶ್, ನಾಗರಾಜು, ಪುನಿತ್, ಮಂಜುನಾಥ್ ಕಳ್ಳರನ್ನು ಪತ್ತೆ ಹಚ್ಚಿ ದೇವರ ಆಭರಣ ಮತ್ತು ಹುಂಡಿ ಹಣವನ್ನು ಹುಡುಕಿಕೊಡಬೇಕೆಂದು ಪೊಲೀಸರಲ್ಲಿ ಕೇಳಿಕೊಂಡಿದ್ದಾರೆ.


