ಚಿತ್ರನಟಿ, ರಂಗಭೂಮಿ ಕಲಾವಿದೆಯ ರಾಜ್ಯ ಪ್ರಶಸ್ತಿ ಚಿನ್ನದ ಪದಕ ಸೇರಿ 90 ಗ್ರಾಂ ಚಿನ್ನ ದೋಚಿದ್ದ ಕಳ್ಳರನ್ನು ತಿಪಟೂರು ನಗರ ಪೊಲೀಸರು ಬಂಧಿಸಿದ್ದಾರೆ. ಶಂಕರ್ (26), ಗುರುರಾಜು ( 33), ಮನೋಜ್ ( 18) ಬಂಧಿತರು.
ತಿಪಟೂರಿನ ವಿಜಯನಗರದಲ್ಲಿ ವಾಸವಿದ್ದ ನಟಿ, ರಂಗಭೂಮಿ ಕಲಾವಿದೆ ಹೇಮಲತ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿಯಾಗಿ 20 ಗ್ರಾಂ ತೂಕದ ಚಿನ್ನದ ಪದಕ ನೀಡಿ ಗೌರವಿಸಿತ್ತು. ಚಿನ್ನದ ಪದಕ, ಮಾಂಗಲ್ಯ ಸರ, ಉಂಗುರ ಸೇರಿದಂತೆ 90 ಗ್ರಾಂ ಚಿನ್ನದ ಒಡವೆಗಳನ್ನ ವ್ಯಾನಿಟಿ ಬ್ಯಾಗ್ನಲ್ಲಿಟ್ಟಿದ್ದರು. ಆರೋಪಿಗಳು ಮನೆಗೆ ಪೈಂಟ್ ಮಾಡಲು ಬಂದಿದ್ದ ವೇಳೆ ಚಿನ್ನದ ಒಡವೆಗಳು ಕಾಣೆಯಾಗಿತ್ತು. ಅನುಮಾನ ಬಂದು ಹೇಮಲತ ಪೊಲೀಸರಿಗೆ ದೂರು ನೀಡಿದ್ದರು. .
ತಿಪಟೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿಗಳನ್ನು ಪತ್ತೆ ಮಾಡಿ ವಿಚಾರಣೆ ನಡೆಸಿ 90 ಗ್ರಾಂ ಚಿನ್ನದ ಒಡವೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಗಾರದ ನಾಣ್ಯ ನೀಡುವುದಾಗಿ ನಂಬಿಸಿ ವಂಚನೆ
ಕಡಿಮೆ ದರಕ್ಕೆ ಬಂಗಾರದ ನಾಣ್ಯ ನೀಡುವುದಾಗಿ ನಂಬಿಸಿ ವಂಚನೆ ಮಾಡಿದ್ದ ಆರೋಪಿಗಳಿಬ್ಬರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಪರಶುರಾಮ ಹಾಗೂ ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದ ಮನೋಜ್ ಬಂಧಿತ ಆರೋಪಿಗಳು. ಬಂಧಿತರಿಂದ 5.90 ಲಕ್ಷ ನಗದು, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ವಾಹನ ಜಪ್ತಿ ಮಾಡಲಾಗಿದೆ.
ಮಂಡ್ಯದ ಜಿಲ್ಲೆಯ ಕುಂದೂರು ಗ್ರಾಮದ ಮೂರ್ತಿ ಎಂಬುವರಿಗೆ ಕಡಿಮೆ ದರಕ್ಕೆ ಚಿನ್ನ ನೀಡುವುದಾಗಿ ವಂಚನೆ ಮಾಡಿದ್ದ ಆರೋಪಿಗಳು ಮೊದಲು ಒಂದು ಅಸಲಿ ಚಿನ್ನದ ನಾಣ್ಯ ನೀಡಿ ನಂಬಿಸಿದ್ದರು. ಬಳಿಕ ನಕಲಿ ನಾಣ್ಯ ನೀಡಿ ವಂಚಿಸಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


