14 ವರ್ಷದ ಯುವ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ ಸಿಡಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಕದಿನ ಏಷ್ಯಾಕಪ್ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ವಿರುದ್ಧ 234 ರನ್ ಗಳ ಬೃಹತ್ ಗೆಲುವು ದಾಖಲಿಸಿದೆ.
ದುಬೈನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 433 ರನ್ ಸಂಪಾದಿಸಿತು. ಅಸಾಧ್ಯದ ಗುರಿ ಬೆಂಬತ್ತಿದ ಯುಎಇ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು.
ಒಂದು ಹಂತದಲ್ಲಿ ಯುಎಇ ತಂಡ 53 ರನ್ ಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಪೃಥ್ವಿ ಮದು ಮತ್ತು ಉದ್ದೀಶ್ ಸೂರಿ 7ನೇ ವಿಕೆಟ್ ಗೆ 85 ರನ್ ಜೊತೆಯಾಟದಿಂದ ಹೋರಾಟ ನಡೆಸಿದರು.
ಪೃಥ್ವಿ ಮಧು 87 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 50 ರನ್ ಬಾರಿಸಿ ಔಟಾದರೆ, ಉದ್ದೀಶ್ ಸೂರಿ 106 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 78 ರನ್ ಬಾರಿಸಿ ಅಜೇಯರಾಗಿ ಉಳಿದರು.
ಉದ್ದೀಶ್ ಮತ್ತು ಸಲೆಹ್ ಅಮಿತ್ ಮುರಿಯದ 8ನೇ ವಿಕೆಟ್ ಗೆ 71 ರನ್ ಜೊತೆಯಾಟ ನಿಭಾಯಿಸಿ ಆಲೌಟ್ ಭೀತಿಯಿಂದ ಪಾರು ಮಾಡಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.
ವೈಭವ್ ಆರ್ಭಟ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಭರ್ಜರಿ ಫಾರ್ಮ್ ನಲ್ಲಿರುವ ಭಾರತ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು.
56 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ 171 ರನ್ ಸಿಡಿಸಿ ಅತ್ಯಂತ ವೇಗದ ಶತಕ ಹಾಗೂ ಅತಿ ಕಿರಿಯ ವಯಸ್ಸಿನಲ್ಲಿ ಗರಿಷ್ಠ ರನ್ ಬಾರಿಸಿದ ಎರಡು ವಿಶ್ವದಾಖಲೆ ಬರೆದರೂ ಅಧಿಕೃತವಾಗಿ ದಾಖಲೆ ಪುಟಕ್ಕೆ ಸೇರ್ಪಡೆ ಆಗಲಿಲ್ಲ.
ಸೂರ್ಯವಂಶಿ 95 ಎಸೆತಗಳಲ್ಲಿ 9 ಬೌಂಡರಿ ಮತ್ತು 14 ಸಿಕ್ಸರ್ ಒಳಗೊಂಡ 171 ರನ್ ಸಿಡಿಸಿದರು. ಏರಾನ್ ಜಾರ್ಜ್ 73 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 69 ರನ್ ಹಾಗೂ ವಿಹಾನ್ ಮಲ್ಹೋತ್ರಾ 55 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿ ಉತ್ತಮ ಬೆಂಬಲ ನೀಡಿದರು.
ಕೆಳ ಕ್ರಮಾಂಕದಲ್ಲಿ ವೇದಾಂತ್ ತ್ರಿವೇದಿ (38) ಮತ್ತು ಅಭಿಜ್ಯಾನ್ ಕುಂದ್ (32) ಮತ್ತು ಕಾನಿಷ್ಕ್ ಚೌಹಾಣ್ (28) ತಂಡದ ಮೊತ್ತ 400ರ ಗಡಿ ದಾಟಿಸಲು ನೆರವಾದರು. ಯುಎಇ ಪರ ಯುಗ್ ಶರ್ಮ ಮತ್ತು ಉದಿತ್ ಶೌರಿ ತಲಾ 2 ವಿಕೆಟ್ ಪಡೆದರು.


