Menu

ಪಾಲಿಕೆಗಳಿಗೆ ತಲಾ 200 ಕೋಟಿ ರೂ. ನೀಡಲು ಸರ್ಕಾರದಿಂದ ಐತಿಹಾಸಿಕ ನಿರ್ಧಾರ: ಸಚಿವ ಬೈರತಿ ಸುರೇಶ್

byrati suresh

ವಿಧಾನಸಭೆ: ರಾಜ್ಯದಲ್ಲಿರುವ 12 ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂಪಾಯಿಯಂತೆ ಒಟ್ಟು 2400 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸುರೇಶ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂತಹ ದಿಟ್ಟ ನಿರ್ಧಾರವನ್ನು ಕೈಗೊಂಡಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಪ್ರಥಮ ಎಂದು ಹೇಳಿದರು.

ಈ ಹಿಂದೆ ಯಾವುದೇ ಸರ್ಕಾರವಾಗಲೀ, ಮುಖ್ಯಮಂತ್ರಿಗಳಾಗಲೀ ಮಹಾನಗರ ಪಾಲಿಕೆಗಳಿಗೆ ಇಷ್ಟೊಂದು ಪ್ರಮಾಣದ ಅನುದಾನವನ್ನು ನೀಡಿರಲಿಲ್ಲ. ಸರ್ಕಾರದ ಈ ವಿಶೇಷ ಅನುದಾನ ಪ್ರತಿಯೊಂದು ಪಾಲಿಕೆಗಳಿಗೂ ತಲುಪಲಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿದೆ ಎಂದರು.

ಇದಕ್ಕೂ ಮುನ್ನ ಸದಸ್ಯ ದಿನಕರ್ ಕೇಶವ್ ಶೆಟ್ಟಿ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಂಖಾನ್ ಅವರ ಪರವಾಗಿ ಉತ್ತರ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರವನ್ನು ಪಟ್ಟಣ ಪಂಚಾಯತ್ ನಿಂದ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಾಧ್ಯವಿಲ್ಲ ಎಂದರು.

2011 ರ ಜನಗಣತಿ ಪ್ರಕಾರ ಈ ಪಟ್ಟಣದಲ್ಲಿ 19 ಸಾವಿರ ಜನಸಂಖ್ಯೆ ಇದೆ. ಆದರೆ, ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು 20 ರಿಂದ 50 ಸಾವಿರ ಜನಸಂಖ್ಯೆ ಇರಬೇಕು. ಈ ಮಾನದಂಡದ ಆಧಾರದ ಮೇಲೆ ಪೌರಾಡಳಿತ ಇಲಾಖೆ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ವಿವರಿಸಿದರು.

ಹೀಗಿದ್ದರೂ, ಇನ್ನೊಮ್ಮೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Related Posts

Leave a Reply

Your email address will not be published. Required fields are marked *