ಬಾಗಲಕೋಟೆಯ ನವನಗರದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್‌ನಿಂದ ಪರಾರಿಯಾಗಿದ್ದಾರೆ.
ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು, ತಕ್ಷಣ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡು ವಿಜಯಪುರದಲ್ಲಿ ವಿದ್ಯಾರ್ಥಿನಿಯರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತಂದಿದ್ದಾರೆ. ನವನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸಿಬ್ಬಂದಿ, ಮೊಬೈಲ್ ಬಳಸಿದರೆ ಪೋಷಕರಿಗೆ ಹೇಳುತ್ತೇನೆ ಎಂದು ಎಚ್ಚರಿಸಿದ್ದರು.
ಇದಕ್ಕೆ ಸಿಟ್ಟಾದ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಬುಧವಾರ ರಾತ್ರಿ ವಸತಿ ಶಾಲೆಯನ್ನೇ ಬಿಟ್ಟು ಹೋಗಿದ್ದಾರೆ. ಸಿಬ್ಬಂದಿ ಕೂಡಲೇ ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಬಾಗಲಕೋಟೆಯಿಂದ ಹುನಗುಂದಕ್ಕೆ ಹೋಗಿದ್ದ ವಿದ್ಯಾರ್ಥಿನಿಯರು ಅಲ್ಲಿಂದ ವಿಜಯಪುರಕ್ಕೆ ತೆರಳಿದ್ದರು. ಬಾಲಕಿಯರು ನಾಪತ್ತೆಯಾದ ನಾಲ್ಕೇ ತಾಸಿನಲ್ಲಿ ಅವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊದಲಿನಿಂದಲೂ ಮೊರಾರ್ಜಿ ಶಾಲೆಗಳಲ್ಲಿ ಮಕ್ಕಳ ಮೊಬೈಲ್ ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಆದರೂ ನಾಲ್ವರಲ್ಲಿ ಒಬ್ಬ ವಿದ್ಯಾರ್ಥಿನಿ ಹಾಸ್ಟೆಲ್ ಒಳಗೆ ಮೊಬೈಲ್ ತಂದಿದ್ದು, ನಾಲ್ವರೂ ಸೇರಿ ಬಳಕೆ ಮಾಡುತ್ತಿರುವಾಗ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


