ಸವಣೂರ: ಪಟ್ಟಣದ ಸರಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕನೋರ್ವ, ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಪಾಲಕರು ಹಾಗೂ ಸಾರ್ವಜನಿಕರು ಕಾನೂನು ಉಲ್ಲಂಘಿಸುವ ಮೂಲಕ ಶಿಕ್ಷಕನ ಬಟ್ಟೆ ಹರಿದು, ತಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮೂಲಕ ಠಾಣೆಗೆ ಕರೆತಂದ ಘಟನೆ ಬುಧವಾರ ನಡೆದಿದೆ.
ಠಾಣೆಗೆ ಕರೆ ತಂದ ಶಿಕ್ಷಕನನ್ನು ವಶ ಪಡಿಸಿಕೊಂಡ ಪೊಲೀಸರು, ಉದ್ವಿಗ್ನ ವಾತಾವರಣ ತಿಳಿಯಾಗಿಸಲು ಆರೋಪಿತ ಶಿಕ್ಷಕನನ್ನು ವಿಚಾರಣೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳವುದಾಗಿ ತಿಳಿಸಿ ಗುಂಪಾಗಿ ನಿಂತಿದ್ದ ಸಾರ್ವಜನಿಕರ ಚದುರಿಸಿ ವಾತಾವರಣವನ್ನು ತಿಳಿಗೊಳಿಸಿದರು.
ಆರೋಪಿತ ಶಿಕ್ಷಕ ಜಗದೀಶ ವಗ್ಗನವರ ಸರಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಆಂಗ್ಲ ಭಾಷಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಕಳೆದ ಹಲವು ತಿಂಗಳುಗಳಿಂದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಪಾಲಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಶಿಕ್ಷಕನಿಗೆ ಲೈಂಗಿಕ ಕಿರುಕುಳದ ಕುರಿತು ಪ್ರಶ್ನಿಸಿ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಸಮನ್ವಯಾಧಿಕಾರಿ ಎದರಲ್ಲೆ ಹಿಗ್ಗಾಮುಗ್ಗಾ ತಳಿಸಿ ಶಾಲೆಯಿಂದ ಹೊರಗೆಳೆದು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಶಿಕ್ಷನನ್ನು ಮನ ಬಂದಂತೆ ತಳಿಸಿದ್ದು ಕಂಡು ಬಂದಿತು.
ಬಳಿಕ ಉಪ ವಿಭಾಗಾಧಿಕಾರಿ ಶುಭ ಶುಕ್ಲಾ ನೇತ್ರತ್ವದಲ್ಲಿ , ಶುಭಂ ಶುಕ್ಲಾ, ಉಪ ನಿರ್ದೇಶಕ ಮೋಹನ ದಂಡಿನ ತಹಶೀಲ್ದಾರ ರವಿಕುಮಾರ್ ಕೊರವರ್ ಶಿಕ್ಷಣಾಧಿಕಾರಿ ಎಂ ಎಫ್ ಬಾರ್ಕಿ, ಎಸ್.ಡಿ.ಎಂ.ಸಿ ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿಗಳೊಂದಿಗೆ ಸಭೆ ಕೈಗೊಂಡು ಇದೊಂದು ಕರಾಳ ದಿನಾವಾಗಿದೆ. ಮುಂಬರುವ ದಿನಗಳಲ್ಲಿ ಈ ರೀತಿ ಯಾವುದೇ ಹೆಣ್ಣುಮಕ್ಕಳಿಗೆ ಆಗಬಾರದು. ಪಾಲಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಈ ಕೂಡಲೇ ಘಟನೆಯ ಕುರಿತು ಲಿಖಿತ ರೂಪದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿ. ದೂರು ಸಲ್ಲಿಸಿದ 15 ದಿನಗಳ ಒಳಗಾಗಿ ಶಿಕ್ಷಣಾಧಿಕಾರಿ ಪೊಲೀಸ ಠಾಣೆಗೆ ತೆರಳಿ ಪ್ರಕರಣ ದಾಖಲಿಸಬೇಕು.
ಆರೋಪಿ ಶಿಕ್ಷಕನನ್ನು ಕೂಡಲೇ ಉಪ ನಿರ್ದೇಶಕರು ಅಮಾನತ್ತುಗೊಳಿಸಿ. ಪೊಲೀಸ್ ತನಿಖೆ ಆದ ನಂತರ ಇಲಾಖಾ ತನಿಖೆಯನ್ನು ಕೈಗೊಳ್ಳಿ. ಈ ಶಾಲೆಯ ಕುರಿತಾಗಿ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಇನ್ನೂ ಆಳವಾಗಿ ನೋಡಿದರೆ ಇನ್ನಷ್ಟು ಪ್ರಶ್ನೆಗಳು ಉದ್ಭವಗೊಳ್ಳುತ್ತವೆ. ಈ ಶಾಲೆಯ ಸಮಗ್ರ ಲೆಕ್ಕ ಪರಿಶೋಧನೆ ಕೈಗೊಳ್ಳಿ. ಇಲ್ಲಿನ ಸಿಸಿ ಕ್ಯಾಮರಾ ಕುರಿತು ಪೊಲೀಸರು ತನಿಖೆ ಕೈಗೊಳ್ಳುತ್ತಾರೆ. ಎಲ್ಲ ಶಾಲೆಗಳ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಬೇಕು.
ವಿದ್ಯಾರ್ಥಿನಿಯರಿಗೆ ಹಾಗೂ ಪಾಲಕರಿಗೆ ಪೊಕ್ಸೋ ಕುರಿತು ಸ್ಥಳೀಯ ಭಾಷೆಗಳಲ್ಲಿ ತರಬೇತಿ ನೀಡುವುದು ಅವಶ್ಯವಾಗಿದೆ. ಒಂದೇ ದಿನಕ್ಕೆ ೭ ಲೈಂಗಿಕ ಕಿರುಕುಳ ದೂರು ಬಂದಲ್ಲಿ ಅದು ಒಂದು ದಿನದಲ್ಲಿ ನಡೆದ ಕಿರುಕುಳವಲ್ಲ ಅದು ಹಲವಾರು ದಿನಗಳಿಂದ ನಡೆದಿರಬಹುದು ಅದನ್ನು ತನಿಖೆ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಈ ಕುರಿತು ತನಿಖೆ ಕೈಗೊಳ್ಳಲು ಒಂದು ಕಮಿಟಿಯನ್ನು ರಚಿಸಲು ಮನವಿ ಮಾಡಿ ಅವಶ್ಯವಿದ್ದಲ್ಲಿ ಕೋರ ಕಮಿಟಿ ರಚಿಸಿ ತನಿಖೆ ನಡೆಸಬೇಕು. ಶೇ.೯೯.೯೯ರಷ್ಟು ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಶೇ.೦.೧ ರಷ್ಟು ಶಿಕ್ಷಕರು ಮಾಡುವ ಕೃತ್ಯದಿಂದ ಎಲ್ಲ ಶಿಕ್ಷಕರು ತಲೆ ತಗ್ಗಿಸುವ ಹಾಗೆ ಆಗಬಾರದು.
ನಮಗೆ ಅನ್ಯ ದೇಶಗಳಲ್ಲಿ ಏನಾಗುತ್ತಿದೆ ? ಐಪಿಎಲ್ ನಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಹೆಚ್ಚು ಗಮನವಿರುತ್ತದೆ. ಆದರೆ ತಮ್ಮ ಸುತ್ತಮುತ್ತಲು ಏನು ನಡೆಯುತ್ತಿದೆ ಎಂಬುದರ ಚಿಂತೆ ಇರುವುದಿಲ್ಲ. ನಿಜಕ್ಕೂ ಇದು ನಾಚಿಕೆಗೇಡಿನ ವಿಷಯವಾಗಿದೆ. ಆದ್ದರಿಂದ ದಯವಿಟ್ಟು ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರು ನಿಮ್ಮ ನೆರೆಹೊರೆಯಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ನಿಗಾವಹಿಸಬೇಕು. ತಪ್ಪು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ. ಎಲ್ಲರೂ ಜಾಗೃತರಾಗಿರಿ, ನೀವು ಮಕ್ಕಳಲ್ಲಿ ಜಾಗೃತಿ ಮೂಡಿಸಿ. ಯಾವಾಗ ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ನಿರ್ಭೀತಿಯ ವಾತಾವರಣ ನಿರ್ಮಾಣವಾಗುವುದಿಲ್ಲವೋ ಅಲ್ಲಿಯ ವರೆಗೆ ಒತ್ತಡ ಕಡಿಮೆಯಾಗದು. ಎಲ್ಲ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶೌಚಾಲಯ ವ್ಯವಸ್ಥೆ, ಸಿಸಿ ಕ್ಯಾಮರಾಗಳ ಕುರಿತು ವರದಿ ಸಲ್ಲಿಸಲು ಶಿಕ್ಷಣಾಧಿಕಾರಿಗೆ ಸೂಚಿಸಲಾಯಿತು. ಎಲ್ಲ ಶಾಲೆಗಳಲ್ಲಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಪಾಲಕರ ಸಭೆ ಕೈಗೊಳ್ಳಬೇಕು ಎಂದು ಹೇಳಿದರು.
ಈ ಪ್ರಕರಣವು ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಹಂತದಲ್ಲಿದೆ.


