ತೆಲಂಗಾಣ: ದಕ್ಷಿಣ ಭಾರತದ ಅತ್ಯಂತ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿರುವ ಸುಮಧುರ ಗ್ರೂಪ್ ಸಂಸ್ಥೆಯು ಭಾರತ ಫ್ಯೂಚರ್ ಸಿಟಿಯಲ್ಲಿ ನಡೆದ ‘ತೆಲಂಗಾಣ ರೈಸಿಂಗ್ ಗ್ಲೋಬಲ್ ಸಮಿಟ್ 2025’ ಶೃಂಗಸಭೆಯಲ್ಲಿ 100 ಎಕರೆ ವಿಸ್ತೀರ್ಣದ ಇಂಡಸ್ಟ್ರಿಯಲ್ ಮತ್ತು ವೇರ್‌ಹೌಸಿಂಗ್ ಪಾರ್ಕ್ ಅಭಿವೃದ್ಧಿಗೆ ತೆಲಂಗಾಣ ಸರ್ಕಾರದ ಜೊತೆಗೆ ₹600 ಕೋಟಿ ಹೂಡಿಕೆ ಮಾಡುವ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ.
ಉತ್ಪಾದನೆ, ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಅತ್ಯಾಧುನಿಕ ಕೈಗಾರಿಕಾ ಕ್ಷೇತ್ರಗಳಲ್ಲಿ ದೊಡ್ಡ ಹೂಡಿಕೆ ಮಾಡುವ ಮೂಲಕ 2047ರೊಳಗೆ ತೆಲಂಗಾಣವನ್ನು $3 ಟ್ರಿಲಿಯನ್ ಆರ್ಥಿಕತೆಯಾಗಿ ಮಾಡುವ ರಾಜ್ಯದ ಗುರಿಗೆ ಅನುಗುಣವಾಗಿ ಈ ಒಪ್ಪಂದವು ಮೂಡಿಬಂದಿದೆ.
ಈ ಒಪ್ಪಂದದಡಿ ಸುಮಧುರ ಗ್ರೂಪ್ ಮುಂದಿನ ಎರಡು ವರ್ಷಗಳಲ್ಲಿ ₹600 ಕೋಟಿ ಹೂಡಿಕೆ ಮಾಡಿ 100 ಎಕರೆ ವಿಸ್ತೀರ್ಣದ ಗ್ರೇಡ್ ಎ+ ಇಂಡಸ್ಟ್ರಿಯಲ್ ಪಾರ್ಕ್ ಅಭಿವೃದ್ಧಿ ಪಡಿಸಲಿದೆ. ಜಾಗತಿಕ ಉತ್ಪಾದನಾ ಕಂಪನಿಗಳನ್ನು ಆಕರ್ಷಿಸಿ ಈ ಭಾಗದ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುವುದು ಇದರ ಉದ್ದೇಶವಾಗಿದೆ. ಮುಂದಿನ ತಲೆಮಾರಿನ ಕೈಗಾರಿಕಾ ವ್ಯವಸ್ಥೆಯಾಗಿ ರೂಪುಗೊಳ್ಳಲಿರುವ ಈ ಪಾರ್ಕ್ ಏರೋಸ್ಪೇಸ್, ಆಟೋಮೊಬೈಲ್, ಔಷಧ ತಯಾರಿಕೆ ಮತ್ತು ಇ-ಕಾಮರ್ಸ್ ಕ್ಷೇತ್ರಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ. ಈ ಯೋಜನೆಯಿಂದ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 8,000 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ.
ಈ ಇಂಡಸ್ಟ್ರಿಯಲ್ ಪಾರ್ಕ್ ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯ ಗುಣಮಟ್ಟ, ಪರಿಸರ ಸುಸ್ಥಿರತೆ ಮತ್ತು ಕಾರ್ಯಾಚರಣೆ ದಕ್ಷತೆಯನ್ನು ಹೊಂದಿರಲಿದೆ. ಮಾಡ್ಯುಲರ್ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳು, ವಿಸ್ತರಿಸಬಹುದಾದ ಮ್ಯಾನುಫ್ಯಾಕ್ಚರಿಂಗ್ ಬ್ಲಾಕ್‌ಗಳು, ವಿಶೇಷ ಲಾಜಿಸ್ಟಿಕ್ಸ್ ವಲಯಗಳು, ಹಸಿರು ಅಭಿವೃದ್ಧಿ ಮಾನದಂಡಗಳು ಮತ್ತು ಬಲಿಷ್ಠ ಮೂಲಸೌಕರ್ಯಗಳೊಂದಿಗೆ ಕಂಪನಿಗಳು ತ್ವರಿತವಾಗಿ ಕಾರ್ಯಾರಂಭ ಮಾಡುವಂತೆ ಈ ಪಾರ್ಕ್ ಮೂಡಿಬರಲಿದೆ.
ಈ ಕುರಿತು ಮಾತನಾಡಿದ ಸುಮಧುರ ಗ್ರೂಪ್ ನ ವೈಸ್ ಚೇರ್ ಮನ್ ರಾಮಾರಾವ್ ಕಲಕುಂಟ್ಲ, “ವಿಶ್ವದರ್ಜೆಯ ಮೂಲಸೌಕರ್ಯವೇ ಸುಸ್ಧಿರ ಕೈಗಾರಿಕಾ ಅಭಿವೃದ್ಧಿಯ ಮೂಲಾಧಾರ ಎಂದು ಸುಮಧುರ ಗ್ರೂಪ್ ನಂಬುತ್ತದೆ. ನಮ್ಮ ಮುಂಬರುವ ಇಂಡಸ್ಟ್ರಿಯಲ್ ಪಾರ್ಕ್ ಅಂತಾರಾಷ್ಟ್ರೀಯ ಮಟ್ಟದ ವಿನ್ಯಾಸ, ತಂತ್ರಜ್ಞಾನ ಮತ್ತು ಕಾರ್ಯಾಚರಣೆ ದಕ್ಷತೆಯನ್ನು ಹೊಂದಿರಲಿದೆ. ಇದರಿಂದ ಕಂಪನಿಗಳು ಹೆಚ್ಚು ವೇಗವಾಗಿ ಮತ್ತು ಖಚಿತತೆಯೊಂದಿಗೆ ಬೆಳೆಯಬಹುದು. ತೆಲಂಗಾಣದ ಪ್ರಗತಿಪರ ಮತ್ತು ಬೆಳವಣಿಗೆ-ಪರ ನೀತಿಗಳ ಬೆಂಬಲದೊಂದಿಗೆ ಈ ಪಾರ್ಕ್ ಉನ್ನತ ಮೌಲ್ಯದ ಕೈಗಾರಿಕೆಗಳನ್ನು ಆಕರ್ಷಿಸಲಿದೆ, ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಲಿದೆ. 2047ರೊಳಗೆ $3 ಟ್ರಿಲಿಯನ್ ಆರ್ಥಿಕತೆಯಾಗುವ ರಾಜ್ಯದ ದೂರದೃಷ್ಟಿಗೆ ಅನುಗುಣವಾಗಿ ಈ ಯೋಜನೆ ಮೂಡಿಬಂದಿರುವುದು ನಮಗೆ ಹೆಮ್ಮೆ ತಂದಿದೆ” ಎಂದರು.
ಈ ಯೋಜನೆಯ ಮಹತ್ವದ ಕುರಿತು ಮಾತನಾಡಿದ ಸುಮಧುರ ಗ್ರೂಪ್ ನ ಇಂಡಸ್ಯ್ರಿಟಲ್ ಮತ್ತು ವೇರ್‌ಹೌಸಿಂಗ್ ವಿಭಾಗ ಉಪಾಧ್ಯಕ್ಷರಾದ ಶ್ರೀ ವಂಶೀ ಕರಂಗುಲ ಅವರು, “ಜಾಗತಿಕ ಮಟ್ಟದ ಉತ್ಪಾದನಾ ಕಂಪನಿಗಳಿಗೆ ತೆಲಂಗಾಣ ರಾಜ್ಯವು ಆದ್ಯತೆಯ ತಾಣವಾಗಿ ವೇಗವಾಗಿ ಬೆಳೆಯುತ್ತಿದೆ. ನಮ್ಮ ಮುಂಬರುವ 100 ಎಕರೆ ಇಂಡಸ್ಟ್ರಿಯಲ್ ಪಾರ್ಕ್ ಏರೋಸ್ಪೇಸ್, ಆಟೋಮೋಟಿವ್, ಔಷಧ ಮತ್ತು ಇ-ಕಾಮರ್ಸ್ ಕಂಪನಿಗಳಿಗೆ ಭವಿಷ್ಯ-ಸಿದ್ಧ ವ್ಯವಸ್ಥೆ ಒದಗಿಸಲಿದ್ದು, ಇಲ್ಲಿ ಸುಸ್ಥಿರತೆ ಮತ್ತು ಕಾರ್ಯಾಚರಣೆ ದಕ್ಷತೆಗೆ ಒತ್ತು ನೀಡಲಾಗುವುದು. ತೆಲಂಗಾಣದ ಅತ್ಯುತ್ತಮ ಸರಕು ಸಾಗಾಣಿಕಾ ವ್ಯವಸ್ಥೆ, ಸರಕು ಸಾಗಾಣಿಕಾ ಮೂಲಸೌಕರ್ಯ ಮತ್ತು ಸುಗಮ ಸಾರಿಗೆ ವ್ಯವಸ್ಥೆಯು ದೊಡ್ಡ ಮಟ್ಟದ ಕಂಪನಿಗಳನ್ನು ಆಕರ್ಷಿಸಿ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಸಲು ಸಹಾಯ ಮಾಡಲಿದೆ” ಎಂದರು.
ಈ ಸಹಯೋಗದಿಂದ ತೆಲಂಗಾಣ ತನ್ನ ವಿಶ್ವದರ್ಜೆಯ ಕೈಗಾರಿಕಾ ಮತ್ತು ಸರಕು ಸಾಗಾಣಿಕಾ ಜಾಲವನ್ನು ನಿರ್ಮಿಸುವ ಗುರಿಗೆ ಮತ್ತಷ್ಟು ಹತ್ತಿರವಾಗಿದೆ. ಹೂಡಿಕೆ, ಆವಿಷ್ಕಾರ ಮತ್ತು ಉನ್ನತ ಮೌಲ್ಯದ ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿದೆ.


