Menu

ಊಟಕ್ಕೆ ಸೇರಿದರೆ ಸಿಎಂ ಬದಲಾಗಲ್ಲ, ಹೈಕಮಾಂಡ್‌ ಹೇಳಿದ್ರೆ ಮಾತ್ರ ಬದಲಾವಣೆ: ಗಣಿಗ ರವಿಕುಮಾರ್

ಒಂದೆಡೆ ಊಟಕ್ಕೆ ಸೇರಿದ ತಕ್ಷಣ ನಾಯಕತ್ವ ಬದಲಾವಣೆಗೆ ಅಂದ್ರೆ ಹೇಗೆ. ಊಟಕ್ಕೆ ಸೇರಿದರೆ ಸಿಎಂ ಬದಲಾಗಲ್ಲ, ಹೈಕಮಾಂಡ್‌ ಹೇಳಿದ್ರೆ ಮಾತ್ರ ಬದಲಾವಣೆ ಎಂದು ಮಂಡ್ಯದಲ್ಲಿ ಕಾಂಗ್ರೆಸ್‌ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ರಾಜ್ಯ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಒಂದು ತಿಂಗಳು ಮೌನವ್ರತ ತಾಳಿದ್ದೇನೆ. ಒಂದು ತಿಂಗಳ ಬಳಿಕ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತೇನೆ. ಸಿಎಂ ಪುತ್ರಗೆ ನಮ್ಮೆಲ್ಲರಿಗಿಂತ ಹೆಚ್ಚು ಜವಬ್ದಾರಿ ಇರುತ್ತದೆ. ಅಧಿಕಾರದಲ್ಲಿದ್ದವರು ಶಾಂತ ಸ್ವಭಾವದಿಂದ ಹೋಗಬೇಕು. ಮತ್ತೊಬ್ಬರನ್ನ ರೊಚ್ಚಿಗೇಳಿಸಲು ಹೋಗಬಾರದು ಎಂದು ಸಿಎಂ ಬದಲಾವಣೆ ವಿಚಾರದಲ್ಲಿ ಯತೀಂದ್ರ ಅವರ ಹೇಳಿಕೆಗೆ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಸಹೋದರನಾಗಿ ಯತೀಂದ್ರ ಸಿದ್ದರಾಮಯ್ಯ ಅವ್ರಿಗೆ ಈ ಮಾತು ಹೇಳ್ತಿದ್ದೇನೆ. ಕೆಲವು ಶಾಸಕರು ಒಂದು ಫಾರಂ ಹೌಸ್‌ನಲ್ಲಿ ಊಟಕ್ಕೆ ಸೇರಿದ್ರು. ದೊಡ್ಡಣ್ಣನವರು ಊಟಕ್ಕೆ ಕರೆದಿದ್ರು. ಬೆಂಗಳೂರಿನಲ್ಲಿದ್ದಾಗ ನಮ್ಮ ಮನೆಗೂ ಊಟಕ್ಕೆ ಬರ್ತಾರೆ. ಹಾಗಂದ ಮಾತ್ರಕ್ಕೆ ನಾಯಕತ್ವ ಬದಲಾವಣೆ ಅಂತ ಅಲ್ಲ. ಮನೆಯಲ್ಲಿ ತುಂಟ ಮಕ್ಕಳು ಇರ್ತಾರೆ, ಒಳ್ಳೆ ಮಕ್ಕಳು ಇರ್ತಾರೆ, ನಾನು ಮನೆಗೆ ಒಳ್ಳೆ ಮಗ ಎಂದು ಹಾಸ್ಯಮಯವಾಗಿ ಹೇಳಿದ್ದಾರೆ.

ಇದೇ ಊಟದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್‌, ದೊಡ್ಡಣ್ಣನವರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು. ನನ್ನ ಸ್ನೇಹಿತರೂ ಹೌದು. ಅವರದು ದೊಡ್ಡ ಕುಟುಂಬ. ಕಳೆದ 15 ವರ್ಷಗಳಿಂದ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಮ್ಮ ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುತ್ತದೆಯೇ? ಹೀಗಾಗಿ ನಾನೂ ಸೇರಿದಂತೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದೆವು, ಅಷ್ಟೇ. ಅದರಲ್ಲಿ ಯಾವ ಔತಣಕೂಟವು ಇಲ್ಲ, ಏನೂ ಇಲ್ಲ ಎಂದು ಹೇಳಿದರು.

ಯತೀಂದ್ರ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ ಎನ್ನುವ ಮೂಲಕ ಬೆಂಕಿಗೆ ಬಿಸಿ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ನನ್ನ ತಂದೆಯೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕುರ್ಚಿ ಕಿತ್ತಾಟದ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸಿಎಂ ಸೂಚಿಸಿದ್ದರೂ ಯತೀಂದ್ರ ಅವರ ಈ ನಡವಳಿಕೆ ಬಗ್ಗೆ ಮತ್ತೆ ಚರ್ಚೆಯನ್ನು ಕಾವೇರಿಸಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಮಧ್ಯೆ ಎರಡು ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆದ ಬಳಿಕ ಸಿಎಂ, ಹೈಕಮಾಂಡ್‌ ಹೇಳುವವರೆಗೆ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು.

Related Posts

Leave a Reply

Your email address will not be published. Required fields are marked *