ತುಮಕೂರು ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ನಡೆಸಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳಿಬ್ಬರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜೆಡಿ ಲಿಂಗರಾಜು ಮತ್ತು ಸಹಾಯಕ ಎಸ್ ಪ್ರಸಾದ್ ಬಂಧಿತ ಭ್ರಷ್ಟ ಅಧಿಕಾರಿಗಳು.
ಸಣ್ಣ ಉದ್ದಿಮೆದಾರ ಚೆನ್ನಬಸವೇಶ್ವರ ಎಂಬವರಿಂದ 1.15 ಲಕ್ಷ ರೂ. ಲಂಚ ಪಡೆಯುವಾಗ ಇವರಿಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚೆನ್ನಬಸವೇಶ್ವರ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಒಂದು ವರ್ಷದಿಂದ ಎಲೆಕ್ಟ್ರಿಕಲ್ ಪ್ಯಾನೆಲ್ ತಯಾರಿಸಿ ಸಣ್ಣ ಉದ್ದಿಮೆ ನಡೆಸುತ್ತಿದ್ದಾರೆ.
ಚೆನ್ನಬಸವೇಶ್ವರ ಸರ್ಕಾರದಿಂದ ಸಹಾಯಧನ ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರು. ಈ ಭ್ರಷ್ಟ ಅಧಿಕಾರಿಗಳು 18.75 ಲಕ್ಷ ಸಬ್ಸಿಡಿ ಮಂಜೂರು ಮಾಡಲು 1.25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದ ಉದ್ದಿಮೆದಾರ ದೂರು ಸಲ್ಲಿಸಿದ್ದರು. 10 ಸಾವಿರ ಮುಂಗಡವಾಗಿ ಅಧಿಕಾರಿಗಳಿಗೆ ನೀಡಿದ್ದು, ಬಾಕಿ 1.15 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಎವಿ ಲಕ್ಷ್ಮೀನಾರಾಯಣ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂತೋಷ್, ಎಂ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬಂಧಿಸಿದ ಲೋಕಾಯುಕ್ತ ಪೊಲೀಸರು ಆರೋಪಿ ಅಧಿಕಾರಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


