ಕಳೆದ ವರ್ಷ ಉಡುಪಿಯಲ್ಲಿ ಸಿಕ್ಕಿಬಿದ್ದಿದ್ದ 10 ಮಂದಿ ಅಕ್ರಮ ಬಾಂಗ್ಲಾದೇಶದ ವಲಸಿಗರಿಗೆ ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ.
ಕಳೆದ ವರ್ಷ ಉಡುಪಿಯ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ಶಿಕ್ಷೆ ಪ್ರಕಟಿಸಿತು.
ಆರೋಪಿಗಳು ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ, ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ, ವಂಚಿಸುವ ಉದ್ದೇಶದಿಂದ ಸುಳ್ಳು ಸ್ಪಷ್ಟನೆ ನೀಡಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿದ್ದರು. ಅವರನ್ನು ವಶಕ್ಕೆ ಪಡೆದು ಠಾಣೆಗೆ ನೀಡಿದ ದೂರಿನಂತೆ, ಮಲ್ಪೆ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ದ ಕಲಂ 336(2), 336(3), 340(2), 319(2), 318(4) ಜೊತೆಗೆ 3(5) BNS ಮತ್ತು 14(A) ವಿದೇಶೀಗರ ಕಾಯ್ದೆ, ಕಲಂ:34 ,42 ಆಧಾರ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಅಕ್ರಮವಾಗಿ ಉಡುಪಿಗೆ ಬಂದ ಆರೋಪಿಗಳಾದ ಹಕೀಮ್ ಆಲಿ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ., ಕರೀಮ್ ಎಸ್.ಕೆ, ಸಲಾಂ ಎಸ್.ಕೆ, ರಾಜಿಕುಲ್ ಎಸ್.ಕೆ,ಮೊಹಮ್ಮದ್ ಸೋಜಿಬ್, ರಿಮೂಲ್, ಮೊಹಮ್ಮದ್ ಇಮಾಮ್ ಶೇಖ್ ಹಾಗೂ ಮೊಹಮ್ಮದ್ ಜಹಾಂಗಿರ್ ಆಲಂ ವಿರುದ್ದ ಪೊಲೀಸರು ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಡಿಸೆಂಬರ್ 8ರಂದು 10 ಮಂದಿ ಆರೋಪಿಗಳಿಗೆ 2 ವರ್ಷಗಳ ಕಾಲ ಸಜೆ ಮತ್ತು ತಲಾ 10,000 ರೂ. ದಂಡ ವಿಧಿಸಿ ಆದೇಶಿಸಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


