ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಒಂದು ಮಟ್ಟಿಗೆ ತಣ್ಣಗಾಗಿದ್ದರೂ ಸಿಎಂ ಸಿದ್ದರಾಮಯ್ಯ ಅವರ ಮಗ, ವಿಧಾನಪರಿಷತ್ ಸದಸ್ಯ ಯತೀಂದ್ರ ಅವರು ಬೂದಿ ಮುಚ್ಚಿರುವ ಕೆಂಡಕ್ಕೆ ಗಾಳಿ ಹಾಕಿ ಉರಿಸುವ ಕೆಲಸ ಮುಂದುವರಿಸಿದ್ದಾರೆ. ಬೆಳಗಾವಿಯಲ್ಲಿ ಅವರು ಮುಖ್ಯಮಂತ್ರಿ ಬದಲಾವಣೆ ಸಂಬಂಧ ನೀಡಿರುವ ಹೇಳಿಕೆ ಈಗ ಮತ್ತಷ್ಟು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.
ಎರಡು ದಿನಗಳ ಹಿಂದೆ ಸಿದ್ದರಾಮಯ್ಯ ಅವರೇ ಎರಡು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಸಿಎಂ ಕರೆಸಿಕೊಂಡು ಸುಮ್ಮನಿರುವಂತೆ ತರಾಟೆಗೆ ತೆಗೆದುಕೊಂಡಿದ್ದರು.
ಈಗ ಮತ್ತೆ ಯತೀಂದ್ರ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ಎನ್ನುವ ಮೂಲಕ ಬೆಂಕಿಗೆ ಬಿಸಿ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ನನ್ನ ತಂದೆಯೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕುರ್ಚಿ ಕಿತ್ತಾಟದ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸಿಎಂ ಸೂಚಿಸಿದ್ದರೂ ಯತೀಂದ್ರ ಅವರ ಈ ನಡವಳಿಕೆ ಬಗ್ಗೆ ಮತ್ತೆ ಚರ್ಚೆಯನ್ನು ಕಾವೇರಿಸಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಎರಡು ಬ್ರೇಕ್ಫಾಸ್ಟ್ ಮೀಟಿಂಗ್ ನಡೆದ ಬಳಿಕ ಸಿಎಂ, ಹೈಕಮಾಂಡ್ ಹೇಳುವವರೆಗೆ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು.
ಯತೀಂದ್ರ ಹೇಳಿಕೆಗೆ ಶಾಸಕ ಇಕ್ಬಾಲ್ ಹುಸೇನ್ ಕಿಡಿ
ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಯತೀಂದ್ರ ಅವರ ಹೇಳಿಕೆಗೆ ಕಿಡಿ ಕಾರಿದ್ದು, ನಾವು ಮಾತನಾಡಿದರೆ ಬಲಾತ್ಕಾರ, ಅವರು ಮಾತನಾಡಿದರೆ ಚಮತ್ಕಾರ ಎಂದು ಪ್ರತಿಕ್ರಿಯಿಸಿದ್ದಾರೆ. ನಾವು ಏನಾದರೂ ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ನಮ್ಮ ವರಿಷ್ಠರು ಅಷ್ಟು ವೀಕ್ ಇಲ್ಲ, ಬಲಿಷ್ಠವಾಗಿದ್ದಾರೆ ಎಂದರು.
ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಯತೀಂದ್ರ ಹೇಳಿಕೆ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಅವರು ನೀಡುವ ಹೇಳಿಕೆಯ ಬಗ್ಗೆ ಅವರನ್ನೇ ಕೇಳಬೇಕು, ನಮಗೆ ಹೇಳಿಕೆ ಕೊಡಬೇಡಿ ಎಂದಿದ್ದಾರೆ. ಹೀಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಕ್ಕೆ ಇಕ್ಬಾಲ್ ಹುಸೇನ್ ಅವರಿಗೆ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿತ್ತು.


