ಕಳೆದ ಶನಿವಾರ ರಾತ್ರಿ ಗೋವಾದ ಬೀರ್ಚ್ ಬೈ ನೈಟ್‌ಕ್ಲಬ್‌ನಲ್ಲಿ ಅಗ್ನಿ ದುರಂತ ನಡೆದು ೨೫ ಮಂದಿ ಬಲಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಸಹೋದರರನ್ನು ಥೈಲ್ಯಾಂಡ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಥೈಲ್ಯಾಂಡ್ ಪೊಲೀಸರು ಲುತ್ರಾ ಸಹೋದರರನ್ನು ಭಾರತಕ್ಕೆ ಗಡಿಪಾರು ಮಾಡಲಿದ್ದಾರೆ. ಭಾರತದಿಂದ ಪಲಾಯನ ಮಾಡಿದ್ದ ಕ್ಲಬ್ ಮಾಲೀಕರನ್ನು ಕರೆ ತರಲು ಭಾರತೀಯ ಅಧಿಕಾರಿಗಳ ತಂಡ ಈಗಾಗಲೇ ಥೈಲ್ಯಾಂಡ್‌ಗೆ ಪ್ರಯಾಣಿಸಿದೆ.
ಕ್ಲಬ್ ದುರಂತ ನಡೆದ ಬಳಿಕ ಇವರು ಇಂಡಿಗೋ ವಿಮಾನದಲ್ಲಿ ಥೈಲ್ಯಾಂಡ್‌ಗೆ ಪ್ರಯಾಣಿಸಿದ್ದರು. ಈ ಮಾಹಿತಿ ಖಚಿತಪಡಿಸಿಕೊಂಡ ಪೊಲೀಸರು, ಲುಕ್‌ಔಟ್ ನೋಟೀಸ್ ಜಾರಿಗೊಳಿಸಿದ್ದರು. ವಿದೇಶಾಂಗ ಇಲಾಖೆ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿತ್ತು.
ಲುತ್ರಾ ಸಹೋದರರು 22 ನಗರಗಳು ಮತ್ತು ನಾಲ್ಕು ದೇಶಗಳಲ್ಲಿ ರೋಮಿಯೋ ಲೇನ್ ಹೆಸರಿನ ನೈಟ್ ಕ್ಲಬ್ ಗ್ರೂಪ್ ನಡೆಸುತ್ತಿದ್ದಾರೆ. ಗೋವಾ ಪೊಲೀಸರು ದುರಂತಕ್ಕೆ ಸಂಬಂಧಿಸಿ ವಿಚಾರಣೆ ಆರಂಭಿಸುತ್ತಿದ್ದಂತೇ ಸಹೋದರರು ಥೈಲ್ಯಾಂಡ್‌ಗೆ ಪರಾರಿಯಾಗಿದ್ದರು. ಗೋವಾ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ದೆಹಲಿ ಪೊಲೀಸರು ಈಗಾಗಲೇ ನೈಟ್‌ಕ್ಲಬ್‌ನ ಮೂರನೇ ಪಾಲುದಾರ ಅಜಯ್ ಗುಪ್ತಾ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಗ್ನಿ ಸುರಕ್ಷತಾ ಮಾನದಂಡಗಳ ಆಘಾತಕಾರಿ ಉಲ್ಲಂಘನೆಯೇ ಗೋವಾ ನೈಟ್‌ಕ್ಲಬ್ ಅಗ್ನಿ ಅವಘಢ ಸಂಭವಿಸಲು ಕಾರಣ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಗೋವಾ ಪೊಲೀಸರು ತಿಳಿಸಿದ್ದಾರೆ. ಕ್ಲಬ್ ಆವರಣದಲ್ಲಿ ಯಾವುದೇ ಕ್ರಿಯಾತ್ಮಕ ಅಗ್ನಿಶಾಮಕಗಳು ಅಥವಾ ಸುರಕ್ಷತಾ ಎಚ್ಚರಿಕೆಗಳು ಇರಲಿಲ್ಲ ಎಂಬುದು ದೃಢಪಟ್ಟಿದೆ.


