ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಪ್ರಾಚೀನ ಕಲೆ “ಗಾಂಧಾರಿ” ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ವಿದ್ಯಾರ್ಥಿನಿ ಹಿಮಾಬಿಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 8ನೇ ತರಗತಿಯ ಪರೀಕ್ಷೆ ಬರೆಯುವ ಮೂಲಕ ತಮ್ಮ ಸೇಹಿತರು, ಪೋಷಕರು ಹಾಗೂ ಶಿಕ್ಷಕರ ಗಮನ ಸೆಳೆದು ಅಚ್ಚರಿ ಮೂಡಿಸಿದ್ದಾಳೆ.
ಹಿಮಾಬಿಂದು ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿಯ ಮಗಳು. ‘ಗಾಂಧಾರಿ’ ವಿದ್ಯೆಯನ್ನು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಿ ಯಶಸ್ಸು ಸಾಧಿಸಿದ್ದಾಳೆ. ಆಕೆ ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿನ ಕುರುವಳ್ಳಿ ತಿಮ್ಮಪ್ಪ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ.
ಈ ಶೈಕ್ಷ ಣಿಕ ವರ್ಷದ ಎಫ್‌ಎ4ನ ಆರು ವಿಷಯಗಳ ಪರೀಕ್ಷೆಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆಯನ್ನು ಬರೆದಿದ್ದಾಳೆ. ಪದ್ಮನಾಭ ಗುರೂಜಿ ಆನ್‌ಲೈನ್‌ನಲ್ಲಿ ‘ಗಾಂಧಾರಿ’ ವಿದ್ಯೆಯ ಬಗ್ಗೆ ತರಬೇತಿ ನೀಡುತ್ತಾರೆ. ಶುಲ್ಕ ಪಡೆಯುವುದಿಲ್ಲ. ಗುರುಕಾಣಿಕೆಯಾಗಿ 2 ಸಾವಿರ ರೂ., ನೀಡಿದ್ದೇವೆ ಅಷ್ಟೇ. ನನ್ನ ಮಗಳು ನಾಲ್ಕನೇ ತರಗತಿಯಲ್ಲಿ ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದಳು. ಗಾಂಧಾರಿ ವಿದ್ಯೆ ಕಲಿಸಿದರೆ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ, ಸದಾ ಕ್ರಿಯಾ ಶೀಲರಾಗಿ ಇರುತ್ತಾರೆ ಎನ್ನುವ ಸ್ನೇಹಿತರ ಸಲಹೆ ಕೇಳಿ ಗಾಂಧಾರಿ ವಿದ್ಯೆ ಕಲಿಸಿದೆ ಎಂದು ಆಕೆಯ ತಂದೆ ರಾಮಾಂಜಿನಿ ರೆಡ್ಡಿ ಹೇಳಿದ್ದಾರೆ.
ಗಾಂಧಾರಿ ವಿದ್ಯೆ ಕರಗತದಿಂದ ಜ್ಞಾಪಕ ಶಕ್ತಿ ಹೆಚ್ಚಾಗಿದೆ. ತರಗತಿಗೆ ಪ್ರಥಮ ವಿದ್ಯಾರ್ಥಿಯಾಗಿದ್ದಾಳೆ. ಗಾಂಧಾರಿ ವಿದ್ಯೆಯಲ್ಲಿ 1ನೇ ಹಂತ, 2ನೇ ಹಂತ ಮತ್ತು 3ನೇ ಹಂತ ಹೀಗೆ ನಾನಾ ಹಂತಗಳಿವೆ. ನನ್ನ ಮಗಳು 2 ಹಂತದ ಗಾಂಧಾರಿ ವಿದ್ಯೆಯನ್ನು ಪೂರ್ಣಗೊಳಿಸಿದ್ದಾಳೆ.
ಗಾಂಧಾರಿ ವಿದ್ಯೆ ಮ್ಯಾಜಿಕ್ ಅನ್ನು ಟಿವಿಯಲ್ಲಿ ನೋಡಿದ್ದೆ, ಈಗ ಮಗಳು ಪ್ರದರ್ಶನ ಕೊಡುತ್ತಿರುವುದು ಹೆಮ್ಮೆಯ ಸಂಗತಿ. ಈ ಪ್ರದರ್ಶನದ ಬಗ್ಗೆ ನನಗೆ ಹಲವು ಅನುಮಾನವಿತ್ತು. ದೃಷ್ಟಿ ಇಲ್ಲದೆ ಗುರುತಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಕಾಡಿತ್ತು. ನಾನೇ ಇದನ್ನು ಪರೀಕ್ಷಿಸಿ ಖಚಿತಪಡಿಸಿಕೊಂಡೆ, ಈಗ ನನ್ನ ಮಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆಯನ್ನು ಬರೆಯುತ್ತಿದ್ದಾಳೆ ಎಂದು ಹಿಮಾಬಿಂದುವಿನ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.


