Thursday, December 11, 2025
Menu

ಸಿಎಂ ಬದಲಾವಣೆ: ಯತೀಂದ್ರ ಹೇಳಿಕೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಾರೆ ಅಂದ್ರು ಡಿಸಿಎಂ

ನಾಯಕತ್ವ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧ ಹಾಗೂ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದಿರುವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ ಡಿಸಿಎಂ  ಹೀಗೆ ಉತ್ತರಿಸಿದರು.

ದ್ವೇಷ ಭಾಷಣ ತಡೆ ವಿಧೇಯಕ ಮಂಡನೆಗೆ ಬಿಜೆಪಿ ವಿರೋಧ ಮಾಡುತ್ತಿರುವ ಬಗ್ಗೆ ಕೇಳಿದಾಗ, ” ಬಿಜೆಪಿಯವರು ದ್ವೇಷ ಭಾಷಣದ ಪಿತಾಮಹರು, ಜಾತಿ-ಜಾತಿಗಳು, ಧರ್ಮ-ಧರ್ಮಗಳ ಮಧ್ಯೆ ದ್ವೇಷ ಬಿತ್ತುವ, ವೈಯಕ್ತಿಕ ನಿಂದನೆಯ ಪಿತಾಮಹರು ಈ ಬಿಜೆಪಿಯವರು. ಸಂವಿಧಾನದ ಆಶಯಗಳ ಪ್ರಕಾರ ಅವರು ನಡೆದುಕೊಳ್ಳಲಿ. ಸಂವಿಧಾನಕ್ಕೆ ಗೌರವ ಕೊಡುವ ಇಚ್ಛೆ ಅವರಿಗಿದ್ದರೆ, ಅದನ್ನು ಪಾಲಿಸಲಿ. ದ್ವೇಷ ಭಾಷಣ ಮಾಡದೇ ಹೋದರೆ ಸಮಸ್ಯೆಯೇ ಇರುವುದಿಲ್ಲವಲ್ಲ. ಸಂವಿಧಾನದ ರಕ್ಷಣೆಗೆ ನಾವು ಈ ಕ್ರಮ ಕೈಗೊಂಡಿದ್ದೇವೆ” ಎಂದರು.

ಬ್ಯಾಲೆಟ್ ಇದ್ದಾಗ ಮತ ಕಳ್ಳತನ ಹೇಗೆ ಸಾಧ್ಯ?

ನೆಹರು ಹಾಗೂ ಇಂದಿರಾ ಗಾಂಧಿ ಅವರು ಮತ ಕಳ್ಳತನ ಮಾಡಿದ್ದರು ಎಂಬ ಅಮಿತ್ ಶಾ ಹೇಳಿಕೆ ಬಗ್ಗೆ ಕೇಳಿದಾಗ, “ಅಮಿತ್ ಶಾ ಅವರು ಈ ಬಗ್ಗೆ ಕನಿಷ್ಟ ಜ್ಞಾನ ಹೊಂದಿರಬೇಕು. ಅವರ ಕಾಲದಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿತ್ತು. ಹೀಗಿರುವಾಗ ಮತ ಕಳ್ಳತನ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ

ಕೆಎಸ್ ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು ನಿಮ್ಮನ್ನು ಭೇಟಿಯಾಗಿ ಸಲ್ಲಿಸಿರುವ ಮನವಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, “ಕೆಎಸ್ ಸಿಎ ನೂತನ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಅವರು ಮನವಿ ನೀಡಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ದುರ್ಘಟನೆ ಆಗಬಾರದಿತ್ತು. ಆದರೂ ಆಗಿದೆ. ಅನೇಕ ತಪ್ಪುಗಳು ನಡೆದಿವೆ. ಇವುಗಳನ್ನು ಸರಿಪಡಿಸಿಕೊಂಡು, ಪ್ರತ್ಯೇಕ ಮಾರ್ಗಸೂಚಿ ಅನುಸಾರ ಜನ ಸಂದಣಿ ನಿಯಂತ್ರಣ ಮಾಡಬೇಕಾಗುತ್ತದೆ ಎಂದು ಉತ್ತರಿಸಿದರು.

ಈ ವಿಚಾರದಲ್ಲಿ ನಾನು ವೈಯಕ್ತಿಕವಾಗಿ ಮುಕ್ತ ಮನಸ್ಸಿನಿಂದ ಇದ್ದೇನೆ. ನಮ್ಮ ರಾಜ್ಯದ ಗೌರವ ಹಾಳು ಮಾಡಿಕೊಳ್ಳುವುದು ಬೇಡ. ಈ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟು ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Related Posts

Leave a Reply

Your email address will not be published. Required fields are marked *