Menu

ಆರ್‌ಟಿಒ ಕಚೇರಿಗಳಲ್ಲಿ ಬ್ರೋಕರ್‌ಗಳು: ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯಿತ್ತ ಸಚಿವರು

Ramalinga Reddy

ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡಿದಲ್ಲಿ ಕಚೇರಿಯ ಅಧಿಕಾರಿಗಳ ಹೊಣೆ ಹೊರಬೇಕು, ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರು ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಆರ್‌ಟಿಒ ಕಚೇರಿಗಳಲ್ಲಿ ದಲ್ಲಾಳಿಗಳ ಕಿರುಕುಳದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಗಮನ ಸೆಳೆದಿದ್ದರು.

ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಬರುವಂತೆ ಸಾರಿಗೆ ಇಲಾಖೆಯು ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದೆ. ಕಚೇರಿಯಲ್ಲಿ ದಲ್ಲಾಳಿಗಳು ಕಾಣಿಸಿಕೊಂಡರೆ ಅಲ್ಲಿನ ಆರ್‌ಟಿಒ ಸಿಬ್ಬಂದಿಯನ್ನೇ ಹೊಣೆಗಾರ ರನ್ನಾಗಿ ಮಾಡಲಾಗುವುದು. ಆರ್‌ಟಿಒ ಕಚೇರಿಗೆ ಬಂದಾಗ ನೇರವಾಗಿ ಕೌಂಟರ್‌ಗೆ ಹೋಗಿ ಅರ್ಜಿ ಸಲ್ಲಿಸಿ. ಯಾರಾದರೂ ದಲ್ಲಾಳಿಯಾಗಿ ತೊಂದರೆ ಕೊಟ್ಟರೆ ತಕ್ಷಣ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆರ್‌ಟಿಒ ಕಚೇರಿಗಳಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಸಾರಿಗೆ ಆಯುಕ್ತರು ಇತ್ತೀಚೆಗೆ ವಿಶೇಷ ಸುತ್ತೋಲೆ ಹೊರಡಿಸಿದ್ದಾರೆ. ಪ್ರತಿ ಅರ್ಜಿ ಮತ್ತು ಸ್ವೀಕೃತಿಯನ್ನೂ ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ದಾಖಲಿಸಬೇಕು. ಪ್ರತಿ ವಾರ ಅಧೀಕ್ಷಕರು ಪರಿಶೀಲನೆ ನಡೆಸಬೇಕು. ಪ್ರತಿ ತಿಂಗಳು ತಪಾಸಣೆ ನಡೆಸಿ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು. ಕಚೇರಿ ಆವರಣದಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ, ನೇರವಾಗಿ ಅಧಿಕಾರಿಗಳನ್ನು ಭೇಟಿಮಾಡಿ ಎಂಬ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಲೋಕಾಯುಕ್ತ ಕಚೇರಿಯ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ನವೆಂಬರ್ 1, 2021 ರಿಂದ ಸಾರಿಗೆ ಇಲಾಖೆಯು 52 ಸೇವೆಗಳನ್ನು (ಡ್ರೈವಿಂಗ್ ಲೈಸೆನ್ಸ್ ನವೀಕರಣ, ವಾಹನ ನೋಂದಣಿ, ಪರ್ಮಿಟ್, ತೆರಿಗೆ ಪಾವತಿ ಇತ್ಯಾದಿ) ಆನ್‌ಲೈನ್‌ನಲ್ಲಿ ಒದಗಿಸುತ್ತಿದೆ. Parivahan.gov.in ಮತ್ತು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್ ಮೂಲಕ ಮನೆಯಲ್ಲೇ ಕುಳಿತು ಸೇವೆಗಳನ್ನು ಪಡೆಯಬಹುದು. ಆನ್‌ಲೈನ್ ಸೇವೆಗಳನ್ನು ಜನರಿಗೆ ತಲುಪಿಸುವ ಮೂಲಕ ದಲ್ಲಾಳಿಗಳ ಹಾವಳಿಗಳನ್ನ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *