ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸೆರೆ ಹಿಡಿದಿದ್ದ ನಾಲ್ಕು ಹುಲಿಮರಿಗಳು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿವೆ.
ಹುಣಸೂರು ತಾಲ್ಲೂಕು ಗೌಡನಕಟ್ಟೆ ಹೊಲದಲ್ಲಿ ಸೆರೆಯಾಗಿ ಮೈಸೂರು ಹೊರವಲಯದ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಹುಲಿ ಮರಿಗಳು ನಾಲ್ಕು ದಿನಗಳ ಅಂತರದಲ್ಲಿ ಅನಮಾನಾಸ್ಪದವಾಗಿ ಮೃತಪಟ್ಟಿವೆ.
ಡಿಸೆಂಬರ್ 6ರಂದು ಒಂದು ಹುಲಿಮರಿ, ಡಿ.7ರಂದು ಎರಡು ಹಾಗೂ ಮಂಗಳವಾರ ಒಂದು ಹುಲಿ ಮರಿ ಮೃತಪಟ್ಟಿದೆ. ತಾಯಿ ಹುಲಿ ಆರೋಗ್ಯವಾಗಿದ್ದು, ಹುಲಿಮರಿಗಳ ಅಂಗಾಗಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ನವೆಂಬರ್ 28ರಂದು ಹನಗೋಡು ಹೋಬಳಿಯ ಗೌಡನಕಟ್ಟೆಯ ಪ್ರಕಾಶ್ ಅವರ ಜೋಳದ ಹೊಲದಲ್ಲಿ ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು. ಮಧ್ಯರಾತ್ರಿ ತಾಯಿ ಹುಲಿ ಸೆರೆಯಾಗಿತ್ತು. ಎರಡು ದಿನಗಳ ನಂತರ ನವೆಂಬರ್ 30ರಂದು ನಾಲ್ಕು ಹುಲಿಮರಿಗಳು ಪತ್ತೆಯಾಗಿತ್ತು. ಅವುಗಳನ್ನು ರಕ್ಷಿಸಿ ಕೂರ್ಗಳ್ಳಿ ಪುನರ್ವಸತಿ ಕೇಂದ್ರಲ್ಲಿದ್ದ ತಾಯಿ ಹುಲಿಯೊಂದಿಗೆ ಬಿಡಲಾಗಿತ್ತು.
ಹುಲಿಮರಿಗಳು ಸೆರೆ ಹಿಡಿಯುವ ವೇಳೆ ಜನರ ಕಿರುಚಾಟದಿಂದ ಗಾಬರಿಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೇ ಬಳಲಿದ್ದವು. ಸೆರೆ ಹಿಡಿಯುವ ವೇಳೆಯೇ ಸೂಕ್ತ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು.
ತಾಯಿ ಹಾಗೂ ನಾಲ್ಕು ಮರಿಗಳನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮರಿಗಳು ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅಸ್ವಸ್ಥಗೊಂಡಿದ್ದ ಇವು ನಾಲ್ಕು ದಿನಗಳ ಅಂತರದಲ್ಲಿ ಸಾವಿಗೀಡಾಗಿವೆ.
ಹುಲಿ ಮರಿಗಳ ಶವ ಪರೀಕ್ಷೆ ನಡೆಸಿದ್ದು, ಮರಿಗಳ ಅಂಗಾಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳು ವರದಿಯನ್ನು ನಿರೀಕ್ಷಿಸುತ್ತಿದ್ದಾರೆ.
ಶೀಘ್ರ ವರದಿ ಬರಲಿದ್ದು, ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮಹಮ್ಮದ್ ಯಾಜುದ್ದೀನ್ ತಿಳಿಸಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ವಿಷಪ್ರಾಶನದಿಂದ ಮೃತಪಟ್ಟ ಘಟನೆ ನಂತರ ರಾಜ್ಯವೇ ಬೆಚ್ಚಿಬೀಳುವ ಘಟನೆ ಇದಾಗಿದೆ.


