ತಿರುಪತಿ: ನಕಲಿ ತುಪ್ಪ ಮಾರಾಟ, ಕಾಣಿಕೆ ಡಬ್ಬಿ ಕಳವು ನಂತರ ಇದೀಗ ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ನಕಲಿ ರೇಷ್ಮೇ ವಸ್ತ್ರಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಶ್ರೇಷ್ಠ ಮಲ್ಬೇರಿ ರೇಷ್ಮೆ ಎಂದು ಪೂರೈಕೆದಾರರು ಪಾಲಿಸ್ಟರ್ ದುಪ್ಪಟ್ಟ ಹಾಗೂ ಶಾಲುಗಳನ್ನು ಪೂರೈಸಿ 55 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದ್ದು, ಆಂಧ್ರಪ್ರದೇಶ ಸರ್ಕಾರ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಗುಪ್ತಚರ ಮತ್ತು ಭದ್ರತಾ ವಿಭಾಗಕ್ಕೆ ಸರಬರಾಜು ಮಾಡಲಾಗುತ್ತಿರುವ ದುಪಟ್ಟಾಗಳು ಮೂಲ ಟೆಂಡರ್ಗೆ ಹೊಂದಿಕೆಯಾಗುತ್ತವೆಯೇ ಎಂದು ಪರಿಶೀಲಿಸಲು ಆದೇಶಿಸಿದ ನಂತರ ವಂಚನೆ ಬೆಳಕಿಗೆ ಬಂದಿದೆ.
ಪ್ರತಿಯೊಂದು ದುಪಟ್ಟಾದ ಒಂದು ಬದಿಯಲ್ಲಿ `ಓಂ ನಮೋ ವೆಂಕಟೇಶಾಯ’ ಎಂದು ಸಂಸ್ಕೃತದಲ್ಲಿ ಮತ್ತು ಇನ್ನೊಂದು ಬದಿಯಲ್ಲಿ ತೆಲುಗು ಭಾಷೆಯಲ್ಲಿ ಮುದ್ರಿತವಾಗಬೇಕು. ಜೊತೆಗೆ ಶಂಕು, ಚಕ್ರ ಮತ್ತು ದೇವಸ್ಥಾನದ ಚಿಹ್ನೆಗಳನ್ನು ಹೊಂದಿರಬೇಕು ಮತ್ತು ಗಾತ್ರ, ತೂಕ ಮತ್ತು ಗಡಿ ವಿನ್ಯಾಸದ ಕುರಿತು ಸ್ಥಿರ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಷರತ್ತು ವಿಧಿಸಿತ್ತು.
ಷರತ್ತಿನಂತೆ ದುಪ್ಪಟ್ಟದಲ್ಲಿ ಎಲ್ಲವೂ ಇದ್ದರೂ ದುಪಟ್ಟ ಸೇರಿದಂತೆ ವಸ್ತ್ರಗಳು ಶುದ್ಧ ರೇಷ್ಮೇ ಆಗಿರದೇ ಪಾಲಿಸ್ಟರ್ ಮುಂತಾದ ನಕಲಿ ಬಟ್ಟೆ ನೀಡಲಾಗಿದೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ತಿರುಪತಿಯ ಟಿಟಿಡಿ ಗೋದಾಮಿನಿಂದ ಮತ್ತು ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸುವ ತಿರುಮಲದ ವೈಭವೋತ್ಸವ ಮಂಟಪದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಎಲ್ಲಾ ದುಪಟ್ಟಾಗಳನ್ನು ವಿಆರ್‌ಎಸ್ ಎಕ್ಸ್‌ಪೋರ್ಟ್ ಆಫ್ ನಗರಿ ಎಂಬ ಒಂದೇ ಸಂಸ್ಥೆ ಹಲವು ವರ್ಷಗಳಿಂದ ದೇವಾಲಯದ ಟ್ರಸ್ಟ್‌ಗೆ ಪೂರೈಸುತ್ತಿದೆ.
ಮಾದರಿಗಳನ್ನು ವಿವರವಾದ ವಿಶ್ಲೇಷಣೆಗಾಗಿ ಬೆಂಗಳೂರು ಮತ್ತು ಧರ್ಮಾವರಂನಲ್ಲಿರುವ ಕೇಂದ್ರ ರೇಷ್ಮೆ ಮಂಡಳಿ (CSB) ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಎರಡೂ ಪ್ರಯೋಗಾಲಯಗಳು ಒಂದೇ ಫಲಿತಾಂಶವನ್ನು ದೃಢಪಡಿಸಿವೆ. ದುಪಟ್ಟಾಗಳು 100% ಪಾಲಿಯೆಸ್ಟರ್ ಆಗಿದ್ದವು. ಕಡ್ಡಾಯ ರೇಷ್ಮೆ ಹೊಲೊಗ್ರಾಮ್ ಟ್ಯಾಗ್ ಅದರಲ್ಲಿ ಇರಲಿಲ್ಲ ಎಂಬುದು ತಿಳಿದುಬಂದಿದೆ.
ವಿಆರ್‌ಎಸ್ ಎಕ್ಸ್‌ಪೋರ್ಟ್ ಮತ್ತು ಅದರ ಕಂಪನಿಗಳು 2015 ಮತ್ತು 2025 ರ ನಡುವೆ ಟಿಟಿಡಿಗೆ ಸುಮಾರು 54.95 ಕೋಟಿ ರೂ. ಮೌಲ್ಯದ ಬಟ್ಟೆಯನ್ನು ಪೂರೈಸಿವೆ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ, ಸಂಸ್ಥೆಯು ಪ್ರತಿ ಪೀಸ್ ದುಪಟ್ಟಾಕ್ಕೆ 1,389 ರೂ.ಗಳಂತೆ ಇನ್ನೂ 15,000 ದುಪಟ್ಟಾಗಳನ್ನು ಪೂರೈಸುವ ಒಪ್ಪಂದವನ್ನು ಪಡೆದುಕೊಂಡಿದೆ.


