ಬೆಂಗಳೂರಿನಲ್ಲಿ ಕೆಲವು ತಿಂಗಳ ಹಿಂದೆ ಟೆಕ್ಕಿಯೊಬ್ಬರಿಗೆ ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ 40 ಲಕ್ಷ ರೂ. ವಂಚಿಸಿದ್ದ ವಿಜಯ್ ಎಂಬ ನಕಲಿ ಸ್ವಾಮೀಜಿಯನ್ನು ಬಂಧಿಸಿರುವ ಜ್ಞಾನ ಭಾರತಿ ಪೊಲೀಸರು ಈಗ ಆತನ ಸಹಚರ ನನ್ನೂ ಬಂಧಿಸಿ ಜೈಲಿಟ್ಟಿದ್ದಾರೆ.
ಟೆಕ್ಕಿ ತೇಜಸ್ ಎಂಬವರು ನಕಲಿ ಸ್ವಾಮೀಜಿ ಮತ್ತು ಆತನ ಸಹಚರರಿಂದ ಮೋಸ ಹೋದವರು. ವಂಚಕರು ಸೂಚಿಸಿದ್ದ ಔಷಧಿ ಸೇವನೆ ಬಳಿಕ ತೀವ್ರ ಅನಾರೋಗ್ಯ ಸಮಸ್ಯೆ ಎದುರಾದಾಗ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತೆಲಂಗಾಣ ಮೊಹಬೂಬ್ ನಗರದಲ್ಲಿ ವಿಜಯ್ ಗುರೂಜಿಯನ್ನು ಬಂಧಿಸಲಾಗಿತ್ತು. ಆತನ ಸಹಚರ ಮನೋಜ್ ಸಿಂಗ್ ಚಿತ್ತೋಡಿಯಾನನ್ನು ತೆಲಂಗಾಣದ ಸೈಬರಬಾದ್ನಲ್ಲಿ ಅರೆಸ್ಟ್ ಮಾಡಲಾಗಿದೆ.
ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿಗಳು, ಬೆಂಗಳೂರು, ತುಮಕೂರು ಸೇರಿ ಒಟ್ಟು ಎಂಟು ಟೆಂಟ್ ಹೊಂದಿದ್ದರು. ಆರೋಪಿಗಳಿಗೆ ಟೆಕ್ಕಿ ನೀಡಿದ್ದ 40 ಲಕ್ಷದಲ್ಲಿ 19.50 ಲಕ್ಷ ಹಣವನ್ನು ವಶಕ್ಕೆ ಪಡೆದ ಪೊಲೀಸರು, ಒಂದು ಟಿಟಿ ವಾಹನ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಪ್ರಕರಣದ ಕುರಿತು ಮಾತನಾಡಿ, ನಕಲಿ ಗುರೂಜಿ ವಿಜಯ್ ಚಿತ್ತೋಡಿಯಾನನ್ನು ಬಂಧಿಸಲಾಗಿದೆ. ನಾವು ಆರೋಪಿಗಳನ್ನು ಬಂಧಿಸಿ ಹಣ ವಶಕ್ಕೆ ಪಡೆದಿದ್ದೇವೆ. ಯಾರಿಗೆ ಆರೋಗ್ಯ ಸಮಸ್ಯೆ ಇದೆಯೋ ಅವರು ಅಧಿಕೃತ ಆಸ್ಪತ್ರೆಗೆ ಭೇಟಿ ನೀಡಬೇಕು. ಈ ರೀತಿ ಟೆಂಟ್ನಲ್ಲಿ ಇದ್ದವರ ಕಡೆ ಹೋದರೆ ಸಮಸ್ಯೆ ಆಗುತ್ತದೆ. ಇಂಥವರ ವಿರುದ್ಧ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿನಲ್ಲಿ ಟೆಂಟ್ನಲ್ಲಿ ಚಿಕಿತ್ಸೆ ನೀಡುವವರ ದಾಖಲೆ ಪರಿಶೀಲಿಸಲಾಗುತ್ತದೆ. ಈ ಪ್ರಕರಣದಲ್ಲಿ ಚಿಕಿತ್ಸೆ ಪಡೆದಿದ್ದ ದೂರುದಾರನಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಆತನ ಜೀವಕ್ಕೂ ಅಪಾಯ ಉಂಟಾಗಬಹುದು. ಹೀಗಾಗಿ ಟೆಂಟ್ನಲ್ಲಿರುವ ವ್ಯಕ್ತಿಗಳ ಬಳಿ ಯಾರೂ ಚಿಕಿತ್ಸೆ ಪಡೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.


