ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿ ಮಂಜೂರಾತಿಗೆ ಬಾಕಿ ಇರುವ ಕಾರ್ಮಿಕ ಕಾರ್ಡ್‌ಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ್ ಎಸ್ ಲಾಡ್ ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಸಭೆಯ ಕಲಾಪದಲ್ಲಿ ಹಿರೇಕೆರೂರು ಕ್ಷೇತ್ರದ ಶಾಸಕರಾದ ಯು ಬಿ ಬಣಕಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಹಿರೇಕೆರೂರು ತಾಲೂಕಿನಲ್ಲಿ ೧೫, ೯೧೦ ಸಕ್ರಿಯ ಕಾರ್ಡ್‌ಗಳು ಇವೆ. ಈಗ ೩, ೧೧೫ ಅರ್ಜಿಗಳು ಬಂದಿವೆ. ಅದರಲ್ಲಿ ೨,೬೨೫ ವಿಲೇವಾರಿ ಮಾಡಲಾಗಿದೆ. ಶೇ ೮೦ ಕಾರ್ಡ್‌ಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದವುಗಳನ್ನು ವಿಲೇವಾರಿ ಮಾಡಲು ಕೋರಿದ್ದಾರೆ ಎಂದು ಹೇಳಿದ್ದಾರೆ.
ತಾಲೂಕಿನಲ್ಲಿ ಬಾಕಿ ಉಳಿದ ಅರ್ಜಿಗಳ ಪರಿಶೀಲನೆ ನಡೆಸಲಾಗುವುದು. ಹಾವೇರಿ ಜಿಲ್ಲೆಯಲ್ಲಿ ಈ ಹಿಂದೆ ಗಣನೀಯ ಪ್ರಮಾಣದಲ್ಲಿ ನಕಲಿ ಕಾರ್ಮಿಕ ಕಾರ್ಡ್‌ಗಳು ನೋಂದಣಿಯಾಗಿದ್ದವು. ಹೊಸ ಕಾರ್ಡ್‌ಗಳ ಅರ್ಜಿಯನ್ನು ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿ ಅನುಮತಿ ನೀಡುತ್ತಾರೆ. ಖುದ್ದು ಭೇಟಿ ನೀಡಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಯಾವುದೇ ತೊಂದರೆ ಇದ್ದರೆ ತಕ್ಷಣ ಪರಿಹಾರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಾವೇರಿ ಜಿಲ್ಲೆಯಲ್ಲಿ ನಕಲಿ ಕಾರ್ಮಿಕ ಕಾರ್ಡ್‌ಗಳ ರದ್ದುಪಡಿಸುವಲ್ಲಿ ಸಚಿವ ಸಂತೋಷ್ ಲಾಡ್ ಅವರು ಪ್ರಮುಖ ಪಾತ್ರ ವಹಿಸಿದರು ಎಂದು ಶಾಸಕರಾದ ಯು ಬಿ ಬಣಕಾರ್ ಶ್ಲಾಘನೆ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯಲ್ಲಿ, ಸಚಿವ ಲಾಡ್ ಅವರು ಕಾರ್ಮಿಕ ಕಾರ್ಡ್‌ಗಳ ಅಕ್ರಮ ತಡೆಗಟ್ಟುವಲ್ಲಿ ಮಹತ್ವದ ಕ್ರಮ ಕೈಗೊಂಡರು. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ನಕಲಿ ಕಾರ್ಮಿಕ ಕಾರ್ಡ್‌ಗಳು ಸಂಪೂರ್ಣವಾಗಿ ರದ್ದಾಗಲಿವೆ. ಇದರ ಹಿಂದೆ ಲಾಡ್ ಅವರ ಶ್ರಮವಿದೆ ಎಂದು ಹೇಳಿದರು.


