ಚಿನ್ನದ ವ್ಯಾಪಾರಿಯೊಬ್ಬರು ಸೊಲ್ಲಾಪುರದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುವಾಗ ನಿದ್ರೆಗೆ ಜಾರಿದ್ದು, ಅವರ ಬಳಿ ಇದ್ದ 5.53 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಕದ್ದು ಕಳ್ಳ ಪರಾರಿಯಾಗಿದ್ದಾನೆ. ಚಿನ್ನದ ವ್ಯಾಪಾರಿ ಸಿದ್ಧೇಶ್ವರ ಎಕ್ಸ್ಪ್ರೆಸ್ ರೈಲಿನಲ್ಲಿ ಸೊಲ್ಲಾಪುರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಯಾಣ್ ಸರ್ಕಾರಿ ರೈಲ್ವೆ ಪೊಲೀಸ್ ನೀಡಿರುವ ಮಾಹಿತಿ ಪ್ರಕಾರ, ವ್ಯಾಪಾರಿ 4,456 ಗ್ರಾಂ ಚಿನ್ನದ ಆಭರಣಗಳನ್ನು ಹೊಂದಿರುವ ಎರಡು ಟ್ರಾಲಿ ಬ್ಯಾಗ್ಗಳನ್ನು ಸರಪಳಿಯಿಂದ ಭದ್ರಪಡಿಸಿಕೊಂಡು ಕುಳಿತಿದ್ದ ಸೀಟಿನ ಕೆಳಗೆ ಇಟ್ಟಿದ್ದರು. ಅವರು ನಿದ್ರಿಸುತ್ತಿದ್ದಾಗ ಅಪರಿಚಿತ ಕಳ್ಳ ಸರಪಳಿ ಮುರಿದು ಎರಡೂ ಬ್ಯಾಗ್ಗಳನ್ನುಕದ್ದು, ಸೊಲ್ಲಾಪುರ ಮತ್ತು ಕಲ್ಯಾಣ್ ನಡುವೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ವ್ಯಾಪಾರಿ ಎಚ್ಚರಗೊಂಡಾಗ ಎರಡೂ ಬ್ಯಾಗ್ಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ.
ಸಂತ್ರಸ್ತ ವ್ಯಾಪಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. “ನಾವು ಎಫ್ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದೇವೆ. ಆರೋಪಿಯು ವ್ಯಾಪಾರಿ ನಿದ್ರೆಗೆ ಜಾರಿದ್ದನ್ನು ನೋಡಿಕೊಂಡು ಚಿನ್ನದ ಆಭರಣಗಳಿದ್ದ ಚೀಲ ಗಳೊಂದಿಗೆ ಪರಾರಿಯಾಗಿದ್ದಾನೆ. ಕಳ್ಳನನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಕಲ್ಯಾಣ್ ಜಿಆರ್ಪಿಯ ಹಿರಿಯ ಇನ್ಸ್ಪೆಕ್ಟರ್ ಪಂಢರಿ ಕಾಂಡೆ ತಿಳಿಸಿದ್ದಾರೆ.


