ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿಗಳಿಂದ ಹೊಟ್ಟೆ ತುಂಬಲ್ಲ ಬದಲಾಗಿ ಸರಕಾರಕ್ಕೆ ಹೊರೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಆರ್ಥಿಕ ವ್ಯವಸ್ಥೆ ಕುಸಿಯುತ್ತದೆ, ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದಾಗಿ ಕಾಂಗ್ರೆಸ್‌ನ ಶಾಸಕರೇ ಹೇಳಿದ್ದಾರೆ. ಹಾಗೂ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಕೈ ಬಿಡುವ ವಿಚಾರ ಚರ್ಚೆ ಆಗಿರಬಹುದು ಎಂದರು.
ದ್ವೇಷ ಭಾಷಣ ಮಾಡೋರು ಕಾಂಗ್ರೆಸ್‌ನವರೇ ಹೊರತು ನಾವಲ್ಲ. ವಿರೋಧ ಪಕ್ಷದವರ ಮೇಲೆ ಸುಖಾಸುಮ್ಮನೆ ಎಫ್ಐಆರ್ ದಾಖಲಿಸಲು ಈ ಕಾಯ್ದೆ ತಂದು ಅಸ್ತ್ರವನ್ನಾಗಿ ಮಾಡಿಕೊಳ್ಳುವ ಹುನ್ನಾರ ಕಾಂಗ್ರೆಸ್‌ನದ್ದು. ಮತಗಳ್ಳತನ ಕಾಂಗ್ರೆಸ್‌ನಲ್ಲಿದೆ. ಬಿಜೆಪಿ ಬೆಂಬಲಿಸುವ ನೈಜ ಮತದಾರರು ಎಲ್ಲೆಡೆ ಇದ್ದಾರೆ ಎಂದು ಹೇಳಿದರು.
ಟಿಪ್ಪು ಜಯಂತಿ ಆಚರಿಸುವಂತೆ ಮನವಿ ಪತ್ರ ಕೊಟ್ಟವರು ಅವಿವೇಕಿಗಳೇ. ಕಾಂಗ್ರೆಸ್‌ನ್ನು ಟಿಪ್ಪು ಪಕ್ಷ ಅಂತ ಮಾಡಿ ನೋಡಿ, ನಾವು-ನಮ್ಮ ಜನ ಏನು ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ. ಮಾನ-ಮರ್ಯಾದೆ ಇಂಥವುಗಳಿಗೆ ಪೂರ್ಣ ವಿರಾಮ ನೀಡಿ ಎಂದು ಸರಕಾರಕ್ಕೆ ಸಲಹೆ ನೀಡಿದರು.


