ಅಮೆರಿಕದ ವಿದೇಶಾಂಗ ಇಲಾಖೆಯು ಜಾರಿಗೊಳಿಸಿರುವ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯು ಭಾರತದ H-1B ವೀಸಾ ಅರ್ಜಿದಾರರಿಗೆ ಸಂಕಷ್ಟ ತಂದೊಡ್ಡಿದೆ. ಈ ನೀತಿಯ ಅನ್ವಯ ಅನೇಕ ನೇಮಕಾತಿಗಳನ್ನು ಮುಂದೂಡಲಾಗಿದೆ. ಡಿಸೆಂಬರ್ ಮಧ್ಯದಿಂದ ಕೊನೆಯವರೆಗೆ ನಿಗದಿಯಾಗಿದ್ದ ಸಂದರ್ಶನಮುಂದಿನ ವರ್ಷದ ಮಾರ್ಚ್ಗೆ ಮುಂದೂಡಿಕೆಯಾಗಿವೆ.
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಮಂಗಳವಾರ ರಾತ್ರಿ ವೀಸಾ ಅರ್ಜಿದಾರರಿಗೆ ಈ ವಿಚಾರವನ್ನು ತಿಳಿಸಿದೆ. ವೀಸಾ ಅಪಾಯಿಂಟ್ಮೆಂಟ್ ಮರು ನಿಗದಿಪಡಿಸಲಾಗಿದೆ ಎಂದು ಸೂಚಿಸುವ ಇಮೇಲ್ ನಿಮಗೆ ಬಂದಿದ್ದರೆ, ನಿಮ್ಮ ಹೊಸ ಅಪಾಯಿಂಟ್ಮೆಂಟ್ ದಿನಾಂಕ ತಿಳಿಸಲಾಗುತ್ತದೆ. ವೀಸಾ ಅರ್ಜಿದಾರರು ಸಂದರ್ಶನ ದಿನಾಂಕವನ್ನು ಮರು ನಿಗದಿಪಡಿಸಿದ ನಂತರವೂ ರಾಯಭಾರ ಕಚೇರಿಗೆ ಆಗಮಿಸಿದರೆ ಪ್ರವೇಶ ನಿರಾಕರಿಸಲಾಗುವುದು ಎಂದು ರಾಯಭಾರ ಕಚೇರಿ ಎಚ್ಚರಿಸಿದೆ.
ಅಮೆರಿಕ ಸರ್ಕಾರವು H-1B ವೀಸಾ ಅರ್ಜಿದಾರರು ಮತ್ತು ಅವರ ಅವಲಂಬಿತರಿಗೆ ಸ್ಕ್ರೀನಿಂಗ್ ಮತ್ತು ಪರಿಶೀಲನಾ ಕ್ರಮಗಳನ್ನು ವಿಸ್ತರಿಸಿದೆ. ಅವರ ಎಲ್ಲಾ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳಲ್ಲಿನ ಗೌಪ್ಯತಾ ಸೆಟ್ಟಿಂಗ್ಗಳನ್ನು ‘public’ಗೆ ಹೊಂದಿಸುವಂತೆ ನಿರ್ದೇಶಿಸಿದೆ. ಡಿಸೆಂಬರ್ 15 ರಿಂದ ಅಧಿಕಾರಿಗಳು ಅವರ ಆನ್ಲೈನ್ ಉಪಸ್ಥಿತಿ ಪರಿಶೀಲಿಸಲಿದ್ದಾರೆ. ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ವೀಸಾ ಅರ್ಜಿದಾರರನ್ನು ಗುರುತಿಸುತ್ತಾರೆ. .ಪ್ರತಿಯೊಂದು ವೀಸಾ ತೀರ್ಪು ರಾಷ್ಟ್ರೀಯ ಭದ್ರತಾ ನಿರ್ಧಾರವಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಅಫ್ಘಾನ್ ಪ್ರಜೆ ಯುಎಸ್ ರಾಷ್ಟ್ರೀಯ ಗಾರ್ಡ್ ಸೈನಿಕರನ್ನು ಹತ್ಯೆಗೈದ ಬಳಿಕ 19 ದೇಶಗಳಿಂದ ಬರುವ ಜನರಿಗೆ ಗ್ರೀನ್ ಕಾರ್ಡ್, ಯುಎಸ್ ಪೌರತ್ವ ಮತ್ತು ಇತರ ವಲಸೆ ಅರ್ಜಿಗಳನ್ನು ಅಮೆರಿಕ ಸ್ಥಗಿತಗೊಳಿಸಿದೆ.
ಅಮೆರಿಕದ H-1B ವೀಸಾ ಸಂದರ್ಶನ ವಿಳಂಬ ನೀತಿ ಭಾರತೀಯರಲ್ಲಿ ಆತಂಕ ಹುಟ್ಟಿಸಿದೆ. ಸಂದರ್ಶನಗಳನ್ನು ಮಾರ್ಚ್ವರೆಗೆ ಮುಂದೂಡಿರುವುದರಿಂದ, ಅಮೆರಿಕನ್ ಕಂಪನಿಗಳು ಭಾರತೀಯ ಉದ್ಯೋಗಿಗಳಿಗೆ ಅಲ್ಲಿಯವರೆಗೆ ಭಾರತದಲ್ಲಿ ಉಳಿಯಲು ಅವಕಾಶ ಮಾಡಿಕೊಡುತ್ತವಾ ಎಂಬ ಚಿಂತೆ ಎದುರಾಗಿದೆ. ಅರ್ಜಿದಾರರು ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕನ್ ವಿರೋಧಿ ಭಾವನೆಯನ್ನು ಹೊರಹಾಕಿದ್ದರೆ ಅಂಥವರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ.


