Wednesday, December 10, 2025
Menu

ಬಿಜೆಪಿ ಸಂಸದರು ಸಂಸತ್ತಿನಲ್ಲಿ ಕರ್ನಾಟಕದ ಬಗ್ಗೆ ಯಾಕೆ ಮಾತನಾಡೋಲ್ಲ: ಸಚಿವ ಸಂತೋಷ್‌ ಲಾಡ್‌ ವಾಗ್ದಾಳಿ

ಬಿಜೆಪಿ ಸಂಸದರು ಕರ್ನಾಟಕದ ಬಗ್ಗೆ ಸಂಸತ್ತಿನಲ್ಲಿ ಚಕಾರ ಎತ್ತುವುದಿಲ್ಲ. ಕಳೆದ ಹನ್ನೊಂದು ವರ್ಷದಲ್ಲಿ ಯಾರು ಮಾತನಾಡಿದ್ದಾರೆ, ದೇಶದಲ್ಲಿ ಸಾಲ ಹತ್ತುಪಟ್ಟು ಹೆಚ್ಚಾಗಿದೆ. ಇದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌  ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನ ಪರಿಷತ್ತಿನ ಕಲಾಪದಲ್ಲಿ  ಬಿಜೆಪಿ ಸದಸ್ಯ ಸಿ ಟಿ ರವಿ ಅವರು ಕೇಂದ್ರವು ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹಾಗೂ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಂಡಿದೆ. ಅದನ್ನು ಮಾತನಾಡಲು ನಿಮ್ಮ ಸಂಸದರು ಬಾಯಿಗೆ ಕಡುಬು ಹಾಕಿಕೊಂಡಿದ್ದಾರೆಯೇ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ  ಲಾಡ್‌ ಹೀಗೆ ಪ್ರತಿಕ್ರಿಯಿಸಿದರು.

ಸಿ ಟಿ ರವಿ ಎಥೆನಾಲ್‌ ಹಂಚಿಕೆ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಲಾಡ್‌ , ಪ್ರಧಾನಿ ಮೋದಿ ಅವರು ಹೇಳಿದಂತೆ ಏನೂ ಮಾಡಲಿಲ್ಲ. ಇಡೀ ದೇಶದ ರೈತರ ಆದಾಯ ಏರಲಿಲ್ಲ. ಅವರ ಸಮಸ್ಯೆ ಹಾಗೇ ಇದೆ. ಈ ದೇಶದ ಸಾಲದ ಬಗ್ಗೆಯೂ ಮಾತನಾಡಬೇಕು ಎಂದು  ಹರಿ ಹಾಯ್ದರು.ಮೋದಿ ಅವರು ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವಿಗುಣ ಮಾಡುತ್ತೇನೆ ಅಂತ ಹೇಳಿದ್ದರು. ಅವರು ಅಧಿಕಾರಕ್ಕೆ ಬಂದು ಇಷ್ಟು ವರ್ಷ ಆಯಿತು. ಆದರೆ ಅನ್ನದಾತರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ದೇಶದ ರೈತರ ಕಷ್ಟ ತೀರಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರ ಹತ್ತುಪಟ್ಟು ಕೊಟ್ಟಿದೆ ಎಂಬುದಕ್ಕೆ ಸ್ಪಷ್ಟೀಕರಣ ಕೊಡಬೇಕು.ಹಾರಿಕೆ ಉತ್ತರ ಕೊಟ್ಟು ಮನಸ್ಸಿಗೆ ಬಂದಂಗೆ ಮಾತನಾಡುವುದಲ್ಲ ಎಂದರು. ದೇಶದಲ್ಲಿ ಸಾಲ ಹತ್ತುಪಟ್ಟು ಹೆಚ್ಚಾಗಿದೆ. ಇದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಬಿಜೆಪಿ ಯವರು ತಮಗೆ ಅನುಕೂಲಕರವೊ ಅದರ ಬಗ್ಗೆಯೇ ಮಾತನಾಡುತ್ತಾರೆ. ವಿಷಯ ಇದ್ದರೆ ಮಾತನಾಡಲಿ. ಸರ್ಕಾರ ಉತ್ತರ ಕೊಡುತ್ತೆ ಎಂದು ಲಾಡ್‌ ಹೇಳಿದರು.

Related Posts

Leave a Reply

Your email address will not be published. Required fields are marked *