ನವದೆಹಲಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಮಾದಕ ವಸ್ತುಗಳ ನಶೆಗೆ ಸಿಕ್ಕಿ ಯುವಜನರು ಹಾಳಾಗುತ್ತಿದ್ದಾರೆ. ರಾತ್ರಿಯಿಂದ ಬೆಳಗ್ಗೆವರೆಗೂ ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಅನ್ನು ನಿರಂತರವಾಗಿ ಪೂರೈಕೆ ಮಾಡುತ್ತಿದ್ದಾರೆ. ಇಂಥ ಕೆಟ್ಟ ಪರಿಸ್ಥಿತಿಯಿಂದ ಯುವಕರನ್ನು ಸರಿದಾರಿಗೆ ತರಲು ವಿದ್ಯಾರ್ಥಿ ದಿಸೆಯಿಂದಲೇ ಭಗವದ್ಗೀತೆ ಬೋಧಿಸಬೇಕು ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು; ಸಮಾಜ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ನಾವು ನಿತ್ಯವೂ ನೋಡುತ್ತಿದ್ದೇವೆ. ಒಳ್ಳೆಯ ಸಮಾಜ ನಿರ್ಮಿಸುವ ಉದ್ದೇಶದಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಭಗವದ್ಗೀತೆ ಕಲಿಸಬೇಕು ಎಂಬುದು ನನ್ನ ಅಭಿಪ್ರಾಯ. ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಇಂಥ ಮನಃಸ್ಥಿತಿಯೇ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.
ಈ ಬಗ್ಗೆ ತಮ್ಮನ್ನು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಹೆಚ್.ಸಿ. ಮಹಾದೇವಪ್ಪ ಅವರಿಗೆ ತಿರುಗೇಟು ಕೊಟ್ಟ ಸಚಿವರು; ಒಳ್ಳೆಯದು, ಸದ್ವಿಚಾರಗಳನ್ನು ಚರ್ಚೆ ಮಾಡುವುದು, ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಬೋಧನೆ ಮಾಡುವುದು ಮನುವಾದ ಆಗುತ್ತದೆಯೇ? ಭಗವದ್ಗೀತೆಯನ್ನು ಕಲಿಸಿ ಎಂದು ಕೇಂದ್ರದ ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದು ಕೂಡ ಮಹಾನ್ ಅಪರಾಧವೇ? ಎಂದು ಖಾರವಾಗಿ ಪ್ರಶ್ನಿಸಿದರು.
ನಾನೆಂದೂ ಭಗವದ್ಗೀತೆಗೆ ಅಪಮಾನ ಮಾಡಿಲ್ಲ, ಮಾಡುವುದೂ ಇಲ್ಲ. ಹಿಂದೊಮ್ಮೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವಾಗ ನಾನು ಭಗವದ್ಗೀತೆ ಬಗ್ಗೆ ಹೇಳಿದ್ದೆ. ಯಾವುದೋ ಒಂದು ವರ್ಗದ ಮಕ್ಕಳಿಗೆ ಕಲಿಸಬೇಕು, ಬೋಧಿಸಬೇಕು ಎಂದು ನಾನು ಹೇಳಿಲ್ಲ. ಎಲ್ಲಾ ಮಕ್ಕಳಿಗೂ ಭಗವದ್ಗೀತೆ ಕಲಿಸಬೇಕು ಎಂದು ಒತ್ತಿ ಹೇಳಿದ್ದೇನೆ. ಇದನ್ನು ಸಚಿವ ಮಹಾದೇವಪ್ಪ ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ವೈಯಕ್ತಿಕವಾಗಿ ನನ್ನ ಮೇಲೆ ದಾಳಿ ಮಾಡಿದರೆ ಉಪಯೋಗವೇನು? ಎಂದು ಸಚಿವ ಕುಮಾರಸ್ವಾಮಿ ಅವರು ಕೇಳಿದರು.
ನನಗೆ ಸಾಧ್ಯವಾದಷ್ಟು ಮಟ್ಟಿಗೆ ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತವನ್ನು ಓದಿಕೊಂಡಿದ್ದೇನೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರೇ ಭಗವದ್ಗೀತೆ ಪ್ರಭಾವಕ್ಕೆ ಒಳಗಾಗಿದ್ದರು. ಅದು ನನ್ನ ಮಾತೃಗ್ರಂಥ, ತಾಯಿ ಸಮಾನ ಎಂದು ಸ್ವತಃ ಬಾಪೂಜಿ ಅವರೇ ಹೇಳಿದ್ದಾರೆ . ಭಗವದ್ಗೀತೆ ಅಮೂಲ್ಯ ಗ್ರಂಥವೆಂದು ನನಗೆ ತೋರಿದೆ. ಸತ್ಯ ಮಾರ್ಗಕ್ಕೆ, ಜ್ಙಾನ ಸಂಪಾದನೆಗೆ ಈ ಗ್ರಂಥ ಸರ್ವೋತ್ಕೃಷ್ಟವಾದುದು ಎಂದು ನಾನು ಭಾವಿಸುತ್ತೇನೆ. ನನ್ನ ನಿರಾಶೆಯ ಸಂದರ್ಭದಲ್ಲಿ ಈ ಗ್ರಂಥ ನನಗೆ ಅಮೂಲ್ಯವಾದ ಸಹಾಯವನ್ನು ಮಾಡಿದೆ ಎಂದು ಗಾಂಧೀಜಿ ಅವರು ಹೇಳಿದ್ದರು ಎಂದ ಸಚಿವರು ಮಾಧ್ಯಗೋಷ್ಠಿಯಲ್ಲಿ ಗೀತೆಯ ೬೩ನೇ ಶ್ಲೋಕವನ್ನು ಓದಿದರು.
ರಾಜ್ಯ ಡ್ರಗ್ಸ್ ದಂಧೆಯಲ್ಲಿ ದಾಪುಗಾಲು ಇಡುತ್ತಿದೆ:
ಕರ್ನಾಟಕ ರಾಜ್ಯ ಡ್ರಗ್ಸ್ ದಂಧೆಯಲ್ಲಿ ದಾಪುಗಾಲು ಇಡುತ್ತಿದೆ. ಎಲ್ಲಾ ದಂದೆಗಳಿಗೂ ರಾಜ್ಯವೇ ಕೇಂದ್ರ ಸ್ಥಾನವಾಗುತ್ತಿದೆ. ಶಾಲಾ ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಡ್ರಗ್ಸ್ ಸೇವನೆಯಿಂದ ಸಮಾಜದಲ್ಲಿ ಸಂಬಂಧಗಳು ಹಾಳಾಗುತ್ತಿವೆ. ಕೆಟ್ಟ ಸಂಸ್ಕೃತಿಯತ್ತ ಯುವಜನರು ಆಕರ್ಷಿತರಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಂಥ ಸುದ್ದಿಗಳು ಮುಖಪುಟಗಳಲ್ಲಿ ರಾರಾಜಿಸುತ್ತಿವೆ. ಪ್ರೊಬೆಷನರಿ ಅವಧಿಯಲ್ಲೇ ಪೊಲೀಸರು ದರೋಡೆ ಕೃತ್ಯಗಳಲ್ಲಿ ಶಾಮೀಲಾಗುತ್ತಿದ್ದಾರೆ. ಇದೆಲ್ಲಾ ಯಾಕಾಗುತ್ತಿದೆ ಎಂಬುದನ್ನು ಆಲೋಚನೆ ಮಾಡಿ ಮಹಾದೇವಪ್ಪನವರೇ ಎಂದು ಕೇಂದ್ರ ಸಚಿವರು ಟಾಂಗ್ ನೀಡಿದರು.
ಭಗವದ್ಗೀತೆ ನಮಗೆ ಶಾಂತಿ, ಶಿಸ್ತು, ಸಂಯಮ ಕಲಿಸುತ್ತದೆ. ಸದ್ವಿಚಾರಗಳ ಮೂಲಕ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತದೆ. ನಾನೂ ಸಂವಿಧಾನದ ಅಡಿಯಲ್ಲೇ ಮಂತ್ರಿಯಾಗಿದ್ದೆನೆ. ಎಲ್ಲರೂ ಭಗವಂತನ ಹೆಸರಿನಲ್ಲಿಯೇ ಪ್ರಮಾಣ ಸ್ವೀಕಾರ ಮಾಡುತ್ತೇವೆ. ನಾನೂ ಅದನ್ನೇ ಮಾಡಿದ್ದೇನೆ. ಆದರೆ, ಮಹಾದೇವಪ್ಪ ಅವರು ಯಾರ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದರೋ ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವರು ತಿರುಗೇಟು ನೀಡಿದರು.
ನಾನು ಯಾರನ್ನೂ ಮನುವಾದಿ ಆಗುವಂತೆ ಹೇಳಿಲ್ಲ. ಬದಲಿಗೆ ಭಗವದ್ಗೀತೆ ಓದಿದರೆ ಒಳ್ಳೆಯ ಗುಣಗಳನ್ನು ಕಲಿಯಬಹುದು ಎಂದು ಹೇಳಿದ್ದೇನೆ. ಇದನ್ನು ತಿರುಚಿ, ವಿರೂಪಗೊಳಿಸಿ ಹೇಳುವ ಅಗತ್ಯವೇನಿದೆ? ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸ್ವಾಮಿಗಳು ಹಮ್ಮಿಕೊಂಡಿದ್ದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಅಲ್ಲಿ ಎಲ್ಲಾ ಪರಮಪೂಜ್ಯರು, ಹಿರಿಯರು, ಪೋಷಕರು ನನ್ನನ್ನು ಒತ್ತಾಯ ಮಾಡಿ, ಪಠ್ಯದಲ್ಲಿ ಭಗವದ್ಗೀತೆಯನ್ನು ಬೋಧಿಸಬೇಕು ಎಂದು ಪ್ರತಿಪಾದಿಸಿದ್ದರು. ನನಗೂ ಅದು ಸರಿ ಎನಿಸಿತು. ಅದೇ ಕಾರಣಕ್ಕೆ ನಾನು ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದೇನೆ. ಹೀಗೆಂದ ಮಾತ್ರಕ್ಕೆ ಮಕ್ಕಳಿಗೆ ಸಂವಿಧಾನದ ಬಗ್ಗೆ ಹೇಳಬೇಡಿ ಎಂದು ಹೇಳಿದ್ದೇನೆಯೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.


