ಜನ ಉತ್ತಮ ಸಿನಿಮಾಗಳನ್ನ ಯಾವತ್ತೂ ಕೈ ಬಿಟ್ಟಿಲ್ಲ. ಆದರೆ ಕನ್ನಡದ ಸಾಕಷ್ಟು ಸಿನಿಮಾಗಳು ಇಂದು ಜನರನ್ನು ತಲುಪಲು ವಿಫಲವಾಗುತ್ತಿವೆ. ಇದಕ್ಕೆ ಕಾರಣ ಕಾಟಾಚಾರದ ಸಿನಿಮಾ ನಿರ್ಮಾಣ. ಇಂಥ ಮನೋಭಾವದವರು ಚಿತ್ರರಂಗಕ್ಕೆ ಬರಲೇಬೇಡಿ ಎಂದು ನವನಟ ಝೈದ್ ಖಾನ್ ಹೇಳಿದರು.
ಕೊಪ್ಪಳನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಲೋ ಬಜೆಟ್ ಆಗಿದ್ದರೂ ಕಂಟೆಂಟ್ ಚನ್ನಾಗಿದ್ದರೆ ಜನ ಕೈ ಹಿಡಿತಾರೆ. ಇಲ್ಲದಿದ್ದರೆ ಯಾರೂ ಥೇಟರ್ ಹತ್ತಿರ ಸುಳಿಯಲ್ಲ. ಆಗ ಸಿನಿಮಾ ನಿರ್ಮಿಸಿದವರೇ ತಮ್ಮ ಮನೆಯಲ್ಲಿ ತಾವೇ ಕುಳಿತು ಸಿನಿಮಾ ನೋಡಬೇಕಷ್ಟೇ ಎಂದು ಅಭಿಪ್ರಾಯಪಟ್ಟರು.
ತಾವು ನಟಿಸಿದ ಕನ್ನಡದ ಮೊದಲ ಸಿನಿಮಾ ಬನಾರಸ್, ಮಿಸ್ಟಿರಿಯಸ್ ಲವ್ ಸ್ಟೋರಿ ಆಗಿತ್ತು. ಜನ ಆ ಸಿನಿಮಾ ಮತ್ತು ಹಾಡುಗಳನ್ನು ಇಷ್ಟಪಟ್ಟಿದ್ದರು. ತಮ್ಮ ಎರಡನೇ ಸಿನಿಮಾ ಕಲ್ಟ್ 2026ರ ಜನೇವರಿ 23ರಂದು ಬಿಡುಗಡೆ ಆಗ್ತಿದೆ. ಇದು ಸಹ ಲವ್ ಸ್ಟೋರಿ ಹೊಂದಿದ್ದು ಥ್ರಿಲ್ಲಿಂಗ್ ಅಂಶ ಹೈಲೈಟ್ ಆಗಿದೆ. ಕಲ್ಟ್ ಅಂದ್ರೆ ಮಾಸ್, ಪಂಥ, ಸಂಸ್ಕೃತಿ ಅಂತಾನೂ ಅರ್ಥ ಇದೆ ಎಂದರು.
ಕಲ್ಟ್ ಸಿನಿಮಾದಲ್ಲಿ ಥ್ರಿಲ್ಲಿಂಗ್ ಇದೆ. ವೈಲೆನ್ಸ್ ಇದೆ. ಮೂರು ಭಿನ್ನತೆಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮೂರು ಹಾಡುಗಳನ್ನು ನೋಡಿದರೆ ಗೊತ್ತಾಗುತ್ತೆ. ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾದ ಪ್ರಮೋಷನ್ ವರ್ಕ್ ಶುರುವಾಗಿದ್ದು ಕೊಪ್ಪಳಕ್ಕೆ ಬಂದಿದ್ದೇನೆ. ಇಲ್ಲಿನ ಜನರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಜನ ಕನ್ನಡ ಸಿನಿಮಾಗಳಿಗೆ ಬರುತ್ತಿಲ್ಲ. ಆದರೆ ಒಳ್ಳೇ ಸಿನಿಮಾಗಳನ್ನ ಜನ ಕೈ ಬಿಡಲ್ಲ. ಹತ್ತು ವರ್ಷಗಳಿಂದ ಸಿನಿಮಾರಂಗದಲ್ಲಿ ಇದ್ದ ಅನುಭವದಲ್ಲಿ ನನ್ನ ಅನಿಸಿಕೆ ಇದು. ನಮ್ಮ ಕಲ್ಟ್ ಸಿನಿಮಾದ ಚಿತ್ರೀಕರಣ ಮತ್ತು ಬಿಡುಗಡೆ ಹೊತ್ತಿನಲ್ಲಿ ಖಂಡಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣನನ್ನ ಮಿಸ್ ಮಾಡ್ಕೊತಿದ್ದೀನಿ. ಡಿಸೆಂಬರ್ 11ಕ್ಕೆ ದರ್ಶನ್ ಅಣ್ಣನ ಸಿನಿಮಾ ಡೆವಿಲ್ ಬಿಡುಗಡೆ ಆಗ್ತಿದೆ. ಎಲ್ಲರೂ ಥೇಟರ್‌ಗೆ ಹೋಗಿ ಸಿನಿಮಾ ನೋಡಿ ಎಂದು ಮನವಿ ಮಾಡಿದರು.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರು ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಕ್ರಿಯೆ ಕೊಟ್ಟಿದಿನಿ. ನನ್ನ ದೃಷ್ಟಿಕೋನದಲ್ಲಿ ಅವರು ಸನ್ನೆ ಮಾಡಿದ್ದು ಜನರಿಗಲ್ಲ, ಜೊತೆಲಿದ್ದ ಸ್ನೇಹಿತರಿಗೆ ಎಂದು ಘಟನೆಗೆ ತೆರೆ ಎಳೆದ ಝೈದ್ ಖಾನ್, ಈಗಿನ ಯುವಜನರಿಗೆ ಇಷ್ಟವಾಗುವ ಕೆಲ ಎಲಿಮೆಂಟ್ಸ್ ಕಲ್ಟ್ ಸಿನಿಮಾದಲ್ಲಿದೆ. ಹಾಗಂತ ಮುಜುಗರ ಆಗುವ ಯಾವ ದೃಶ್ಯಗಳು ಇಲ್ಲ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಕಲ್ಟ್. ಸಿನಿಮಾ ಬಗ್ಗೆ ಹೆಚ್ಚು ಮಾತಾಡಲ್ಲ. ಜನ ಖಂಡಿತವಾಗಿ ನನ್ನ ಈ ಸಿನಿಮಾ ಬಗ್ಗೆ ಮಾತಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಝೈದ್ ಖಾನ್ ಕೊಪ್ಪಳಕ್ಕೆ ಬರುತ್ತಿದ್ದಂತೆ ನಗರದ ಬಸವೇಶ್ವರ ವೃತ್ತದಲ್ಲಿ ಅವರನ್ನು ಸ್ವಾಗತಿಸಲಾಯಿತು. ಅಲ್ಲಿಂದ ಅದ್ಧೂರಿ ಮೆರವಣಿಗೆ ಮೂಲಕ ಅಶೋಕ ವೃತ್ತ, ಕನಕದಾಸ ವೃತ್ತದವರೆಗೆ ತಲುಪಿ ಮಾಲಾರ್ಪಣೆ ಮಾಡಿ ಸಾಹಿತ್ಯ ಭವನಕೆ ಕರೆ ತರಲಾಯಿತು.
ಸಾಹಿತ್ಯ ಭವನದಲ್ಲಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಸಿನಿಮಾ ಗೆಲ್ಲಿಸುವಂತೆ ಮನವಿ ಮಾಡಿದರು. ನಟಿ ರಚಿತಾ ರಾಮ್ ಬರಬೇಕಿತ್ತು. ವಿಮಾನ ಯಾನ ತೊಂದರೆಯಿಂದ ಬರಲಾಗಿಲ್ಲ. ಕೊಪ್ಪಳದ ಜನತೆಗೆ ನಮಸ್ಕಾರ ತಿಳಿಸಿದ್ದಾರೆ. ಜನವರಿ 23ಕ್ಕೆ ಬಿಡುಗಡೆ ಆಗುವ ಕಲ್ಟ್ ಸಿನಿಮಾ ಗೆಲ್ಲಿಸಿ ಎಂದು ನಟ ಝೈದ್ ಖಾನ್ ಕೋರಿದರು.


