ಕಡೂರು ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಕೊಲೆ ಪ್ರಕರಣದಲ್ಲಿ ಬಜರಂಗ ದಳ ಕಾರ್ಯಕರ್ತರು ಭಾಗಿಯಾಗಿದ್ದು, ಮತ್ತೊಬ್ಬ ಆರೋಪಿ ಮಿಥುನ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೊಲೆಯಲ್ಲಿ ಮಿಥುನ್ ಪಾತ್ರ ದೃಢಪಟ್ಟಿದ್ದು, ಚಿಕ್ಕಮಗಳೂರು ನಗರದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಆರೋಪಿ ಮಿಥುನ್ ಪ್ರಕರಣದ ಮೊದಲ ಆರೋಪಿ ಸಂಜಯ್ ಸ್ನೇಹಿತನಾಗಿದ್ದು, ಆರೆಸ್ಸೆಸ್ ಮತ್ತು ಬಜರಂಗದಳದಲ್ಲಿ ಸಕ್ರಿಯ ಕಾರ್ಯಕರ್ತ ಎಂಬುದು ಗೊತ್ತಾಗಿದೆ. ಆರೋಪಿಗಳಾದ ಸಂಜಯ್ ಮತ್ತು ನಾಗಭೂಷಣ್ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ನಿತಿನ್, ದರ್ಶನ್ ಹಾಗೂ ಅಜಯ್ಗಾಗಿ ಹುಡುಕಾಟ ಮುಂದುವರಿದಿದೆ. ಗಣೇಶ್ ಹತ್ಯೆ ಬಳಿಕ ಈ ಮೂವರು ತಲೆಮರೆಸಿಕೊಂಡಿದ್ದಾರೆ.
ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ, ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್(40)ಅವರನ್ನು ಕೊಲೆ ಮಾಡಲಾಗಿತ್ತು. ಕಲ್ಮರಡಿ ಮಠದ ಈ ಕೊಲೆ ನಡೆದಿತ್ತು. ಕಾರಿನಲ್ಲಿ ಗಣೇಶ್ ತೆರಳುತ್ತಿದ್ದಾಗ ಬೈಕ್ನಲ್ಲಿ ಅಡ್ಡಗಟ್ಟಿದ್ದ ಹಂತಕರ ತಂಡ ಮಚ್ಚಿನಿಂದ ದಾಳಿ ನಡೆಸಿ ಮಚ್ಚನ್ನು ಅಲ್ಲೇ ಬಿಸಾಡಿ ಹೋಗಿತ್ತು. ಘಟನೆ ಬಳಿಕ ಆರೋಪಿಗಳ ಪತ್ತೆಗೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ನೇತೃತ್ವದಲ್ಲಿ 4 ತಂಡ ರಚಿಸಿ ಶೋಧ ನಡೆಸಲಾಗಿತ್ತು.
ಗಣೇಶ್ ಗೌಡ ಹತ್ಯೆ ಪ್ರಕರಣದ ಬಳಿಕ ಅಹಿತಕರ ಘಟನೆ ನಡೆಯದಂತೆ ಚಿಕ್ಕಮಗಳೂರು ಪೊಲೀಸರು ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಸಖರಾಯಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಪರಮೇಶ್ವರ್ ಸೇರಿ ಕಾಂಗ್ರೆಸ್ ನಾಯಕರುಖಂಡಿಸಿ, ಅವರ ಸಾವಿನಿಂದ ಕುಟುಂಬದ ಸದಸ್ಯರಷ್ಟೇ ನಾವು ದುಖಿಃತರಾಗಿದ್ದೇವೆ. ಕೊಲೆಗೈದವರನ್ನು ಕಾನೂನಿನ ಪ್ರಕಾರ ಕಠಿಣ ಒಳಪಡಿಸುವ ಮೂಲಕ ನ್ಯಾಯ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದ್ದಾರೆ.


