Menu

ಹುಬ್ಬಳ್ಳಿ-ಧಾರವಾಡ ನಡುವೆ ವಿದ್ಯುತ್ ಕ್ಷಿಪ್ರ ಸಾರಿಗೆ (ERT): ಸಿಎಂ ಜೊತೆ ಸಚಿವ ಲಾಡ್‌ ಸಭೆ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸುಸಜ್ಜಿತ Electric Rapid Transit (E-RT) ಯೋಜನೆ ಕುರಿತು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌  ಭಾಗವಹಿಸಿದ್ದರು.

ಯೋಜನೆಯನ್ನು ಕೈಗೊಳ್ಳಲು ಮುಖ್ಯ ಅಂಶಗಳನ್ನು ಮುಖ್ಯಮಂತ್ರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮೂಲಕ ಸಚಿವರು ವಿವರಿಸಿದರು. ಇಆರ್‌ಟಿ ಪರಿಚಯಿಸಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ HESS ಇಂಡಿಯಾ ಮತ್ತು ಎಸ್‌ಎಸ್‌ಬಿ ಕಂಪನಿಯ ಪ್ರತಿನಿಧಿಗಳು ಈ ವೇಳೆ ಹಾಜರಿದ್ದರು. ಈ ವರ್ಷದ ಏಪ್ರಿಲ್‌ 12 ರಂದು ಕಂಪನಿಯು ಯೋಜನೆ ಸಂಬಂಧ ಒಪ್ಪಂದ ನಡೆದಿತ್ತು.

ಯೋಜನೆಯ ತಾಂತ್ರಿಕ ಅಂಶಗಳು, ಕಾರಿಡಾರ್‌ಗಳು, ಹಣಕಾಸು ವ್ಯವಸ್ಥೆ ಮತ್ತಿತರ ಅಂಶಗಳನ್ನು ಪ್ರಾತ್ಯಕ್ಷಿಕೆ ಮೂಲಕ ಸಬೆಯಲ್ಲಿ  ವಿವರಿಸಲಾಯಿತು. ಪ್ರಾತ್ಯಕ್ಷಿಕೆ ವೀಕ್ಷಿಸಿದ ಮುಖ್ಯಮಂತ್ರಿಗಳು, ಇನ್ನೂ ಹೆಚ್ಚಿನ ಮೌಲ್ಯಮಾಪನಕ್ಕಾಗಿ ಸಾರಿಗೆ ಮತ್ತು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವಂತೆ HESS ಇಂಡಿಯಾ ಮತ್ತು ಎಸ್‌ಎಸ್‌ಬಿಗೆ ತಿಳಿಸಿದರು. ಈ ಪ್ರಸ್ತಾವನೆಯನ್ನು ಹೆಚ್ಚಿನ ಚರ್ಚೆ ಮತ್ತು ತೀರ್ಮಾನಕ್ಕೆ ಮುಂದಿನ ಸಂಪುಟದ ಗಮನಕ್ಕೆ ತರುವುದಾಗಿ ಹೇಳಿದರು.

ಸಭೆಯಲ್ಲಿ ಹಾಜರಿದ್ದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು, ಇ-ಆರ್‌ಟಿಯು ಇತರ ಸಾಂಪ್ರದಾಯಿಕ ಮೆಟ್ರೋಗೆ ಹೋಲಿಸಿದರೆ ಹೆಚ್ಚು ಆರ್ಥಿಕ, ಪರಿಣಾಮಕಾರಿ ಹೇಗೆ ಎಂಬುದನ್ನು ವಿವರಿಸಿದರು. ಹುಬ್ಬಳ್ಳಿ-ಧಾರವಾಡದಂತ ಹೆಚ್ಚಿನ ಪ್ರಯಾಣಿಕರನ್ನು ಹೊಂದಿರುವ ನಗರಕ್ಕೆ ಈ ವ್ಯವಸ್ಥೆ ಸೂಕ್ತವಾಗಿದೆ. ಭವಿಷ್ಯ ದಿನಗಳಿಗೆ ಬೇಕಾದ ಸಂಪರ್ಕವನ್ನು ನೀಡುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರಣದೀಪ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ  ದೀಪಾ ಚೋಳನ್ ಉಪಸ್ಥಿತರಿದ್ದರು.

ಇಆರ್‌ಟಿ ಪರಿಕಲ್ಪನೆಯ ಹಿಂದೆ ಸಚಿವ ಸಂತೋಷ್‌ ಲಾಡ್‌ ಅವರ ಪರಿಶ್ರಮ ಸಾಕಷ್ಟು ಇದೆ. ಈ ಯೋಜನೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ವಿಶ್ವ ದರ್ಜೆಯ ಸಾರಿಗೆ ವ್ಯವಸ್ಥೆಯನ್ನು ಅವಳಿ ನಗರದಲ್ಲಿ ಜಾರಿ ಮಾಡಬೇಕು ಎಂದು ಅವರು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಇಆರ್‌ಟಿ ಕುರಿತು ಸಚಿವ ಲಾಡ್‌ ಅವರು ಧಾರವಾಡದಲ್ಲಿ ಅಧಿಕಾರಿಗಳು ಹಾಗೂ ಪಾಲುದಾರರೊಂದಿಗೆ ಸಭೆಯನ್ನು ನಡೆಸಿದ್ದರು.

ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೂ ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಹುಬ್ಬಳ್ಳಿ-ಧಾರವಾಡ ನಡುವಿನ ಬಿಆರ್‌ಟಿಎಸ್‌ನ ಸಮಸ್ಯೆಗಳನ್ನು ಅರಿಯಲು ಸಚಿವ ಲಾಡ್‌ ಅವರು ಕೆಲವು ತಿಂಗಳ ಹಿಂದೆ ಬಿಆರ್‌ಟಿಎಸ್‌ ಮಾರ್ಗದಲ್ಲಿ ಸ್ವತಃ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ಮಾತನಾಡಿ ಸಮಸ್ಯೆ ಗಳನ್ನು ತಿಳಿದುಕೊಂಡಿದ್ದರು.

Related Posts

Leave a Reply

Your email address will not be published. Required fields are marked *