Saturday, December 06, 2025
Menu

8 ರಿಂದ ಟಿಬಿ ಡ್ಯಾಂ 32 ಗೇಟ್ ಬದಲಾವಣೆ ಕಾರ್ಯಾರಂಭ: ಸಚಿವ ಶಿವರಾಜ ತಂಗಡಗಿ

shivaraj tangadagi

ಕೊಪ್ಪಳ: ಡಿಸೆಂಬರ್ 8 ರಿಂದ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯದ 32 (ಈಗಾಗಲೇ ಒಂದು ಗೇಟ್ ಬದಲಿಸಲಾಗಿದೆ.) ಕ್ರಸ್ಟ್‌ಗೇಟ್‌ಗಳನ್ನು ಬದಲಾಯಿಸುವ ಕಾರ್ಯ ಆರಂಭವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಕರ್ನಾಟಕ ನೀರಾವರಿ ನಿಗಮದ ಮುನಿರಾಬಾದ್‌ನ ಸಿಇ ಕಚೇರಿಯಲ್ಲಿ ಶನಿವಾರ ಜಲಾಶಯದ ಬೋರ್ಡ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪಶ್ಚಿಮ ಬಂಗಾಲದ ಪಾರಕ್ ಬ್ಯಾರೇಜಿಂಗ್ ಕಂಪನಿಗೆ ಈಗಿನ ಕ್ರಸ್ಟ್‌ಗೇಟ್ ಬದಲಿಸಿ, ಹೊಸ ಗೇಟ್‌ಗಳನ್ನು ಅಳವಡಿಸುವ ಗುತ್ತಿಗೆ ನೀಡಲಾಗಿದ್ದು ಒಟ್ಟು 52 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. 2026ರ ಮೇ 15ರೊಳಗೆ ಕಾಮಗಾರಿ ಮುಗಿಸಲು ಡೆಡ್‌ಲೈನ್ ನೀಡಲಾಗಿದೆ. ಈ ಕಂಪನಿ ಗಂಗಾನದಿಯ ಜಲಾಶಯದ ಗೇಟ್ ಬ್ಯಾರೇಜಿಂಗ್ ಮಾಡಿದ ಅನುಭವ ಹೊಂದಿದೆ. ಗಂಗಾನದಿಯ ಗೇಟ್‌ಗಳು ಸಹ ತುಂಗಭದ್ರಾ ಜಲಾಶಯದ ಗೇಟ್‌ಗಳಷ್ಟೇ ಎತ್ತರ, ಅಗಲ, ದಪ್ಪ ಹೊಂದಿದ್ದು ಕಾಮಗಾರಿ ಯಶಸ್ವೀಯಾಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

1951ರಲ್ಲಿ ಆರಂಭಗೊಂಡ ಜಲಾಶಯದ ಕ್ರಸ್ಟ್‌ಗೇಟ್‌ಗಳು 45 ವರ್ಷಗಳ ಬಾಳ್ವಿಕೆ ಹೊಂದಿದ್ದವು. 75 ವರ್ಷಗಳವರೆಗೆ ಬಾಳಿಕೆ ಬಂದಿದ್ದು, ಕಳೆದ ವರ್ಷ ಒಂದು ಗೇಟ್ ಕಳಚಿದ್ದರಿಂದ ಎಲ್ಲ ಗೇಟ್ ಬದಲಾಯಿಸುವ ನಿರ್ಧಾರಕ್ಕೆ ಕರ್ನಾಟಕ ಮತ್ತು ಆಂಧ್ರ ಸರಕಾರಗಳು ಮುಂದಾಗಿವೆ.

ಳವಡಿಕೆ ಆಗಲಿರುವ ಹೊಸ ಕ್ರಸ್ಟ್‌ಗಳು 45 ವರ್ಷಗಳ ಬಾಳ್ವಿಕೆಯ ಖಚಿತತೆ ಹೊಂದಿದ್ದು ಕಾಮಗಾರಿಯ ಒಟ್ಟು ವೆಚ್ಚದ ಶೇಕಡಾ 71ರಷ್ಟು ಆಂಧ್ರದ ಭಾಗದಲ್ಲಿ ಈಗಾಗಲೇ 20 ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗಿದೆ. ಕರ್ನಾಟಕದ ಶೇಕಡಾ 29ರ ಭಾಗದಲ್ಲಿ 10 ಕೋಟಿ ರೂಪಾಯಿ ಸೋಮವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ಜಲಾಶಯದ ಎಲ್ಲ ಕಾಲುವೆಗಳ ದುರಸ್ತಿಗೆ 431 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

Related Posts

Leave a Reply

Your email address will not be published. Required fields are marked *