ರಸ್ತೆ ಬದಿ ನಿಲ್ಲಿಸಿದ್ದ ಶಬರಿಮಲೆ ಅಯ್ಯಪ್ಪ ಭಕ್ತರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಅಯ್ಯಪ್ಪ ಭಕ್ತರು ಸೇರಿ 5 ಮಂದಿ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಝಕಾರೈ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಆಂಧ್ರ ಪ್ರದೇಶದ ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಡಿಎಂಕೆ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರ ಕಾರು ಚಾಲಕ ಮೃತಪಟ್ಟಿದ್ದಾರೆ.
ಮೃತರ ಅಯ್ಯಪ್ಪ ಸ್ವಾಮಿ ಭಕ್ತರನ್ನು ಆಂಧ್ರಪ್ರದೇಶದ ರಾಮಚಂದ್ರ ರಾವ್, ಅಪ್ಪಾರಾವ್ ನಾಯ್ಡು, ಬಂಡಾರಾ ಚಂದ್ರಾರಾವ್, ರಾಮಾರ್ ಹಾಗೂ ಡಿಎಂಕೆ ಪಾಲಿಕೆಯ ಅಧ್ಯಕ್ಷರ ಕಾರು ಚಾಲಕ ಮುಸ್ತಾಖ್ ಅಹ್ಮದ್ ಎಂದು ಗುರುತಿಸಲಾಗಿದೆ. 5 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಮೇಶ್ವರಂಗೆ ತೆರಳುವ ಮಾರ್ಗದ ಕೀಝಕಾರೈ ಬೀಚ್ ರಸ್ತೆಯ ಬದಿ ಬೆಳಗ್ಗೆ ವಿಶ್ರಾಂತಿಗಾಗಿ ಕಾರನ್ನು ನಿಲ್ಲಿಸಿದ್ದಾಗ ಡಿಎಂಕೆ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
ಸಾವನ್ನಪ್ಪಿದವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಮನಾಥಪುರಂ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


