ಬಿಟಿಎಂ ಲೇಔಟ್ ಫಸ್ಟ್ ಸ್ಟೇಜ್‌ನಲ್ಲಿರುವ ರಾಯಲ್ ಮೆನರ್ ಅಪಾರ್ಟ್‌ಮೆಂಟ್‌ನಲ್ಲಿರುವ ೧೫ ಮನೆಗಳವರಿಗೆ ಅದೇ ಅಪಾರ್ಟ್‌ಮೆಂಟ್ ನಿವಾಸಿಯಾಗಿರುವ ವ್ಯಕ್ತಿಯೊಬ್ಬ ಮಾಟ-ಮಂತ್ರದ ಭೀತಿ ಹುಟ್ಟಿಸಿದ್ದು, ದೈಹಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ದೂರು ಸಲ್ಲಿಕೆಯಾಗಿದೆ.
ಆರೋಪಿಯ ರೌಡಿಸಂಗೆ ಹೆದರಿ 16 ಫ್ಲ್ಯಾಟ್‌ಗಳ ನಿವಾಸಿಗಳು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಈ ವ್ಯಕ್ತಿ ಇಡೀ ಅಪಾರ್ಟ್‌ಮೆಂಟ್ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ನಿವಾಸಿಗಳ ಮನೆ ಬಾಗಿಲುಗಳಿಗೆ ಆಗಾಗ ಮಾಟ-ಮಂತ್ರ ಮಾಡಿಸಿರುವಂತಹ ವಸ್ತುಗಳನ್ನು ಕಟ್ಟಿ ಹೋಗುತ್ತಿದ್ದಾನೆ. ಇದರಿಂದಾಗಿ ನಿವಾಸಿಗಳ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ. ಮಾಟ-ಮಂತ್ರದ ಭಯದ ಜೊತೆಗೆ, ಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾನೆ. ತಕ್ಷಣ ಫ್ಲ್ಯಾಟ್‌ಗಳನ್ನು ಖಾಲಿ ಮಾಡಿ ಹೋಗಿ ಎಂದು ಒತ್ತಾಯಿಸುತ್ತಿದ್ದಾನೆ ಎನ್ನಲಾಗಿದೆ. ಬೇಸತ್ತ ಕುಟುಂಬಗಳು ಮಾನಸಿಕವಾಗಿ ಪ್ರಶ್ನಿಸಿದರೆ, ಆತ ತಕ್ಷಣ ರೌಡಿಸಂ ಪ್ರದರ್ಶಿಸಿ ನೇರವಾಗಿ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಾನೆ ಎಂದು ನಿವಬಾಸಿಗಳು ಅಳಲು ವ್ಯಕ್ತಪಡಿಸಿದ್ದಾರೆ.
ನಿವಾಸಿಗಳ ವಾಹನಗಳನ್ನು ಕೆಡವಿ ಹಾಕಿ, ಬೈಕ್‌ಗಳನ್ನು ಬೀಳಿಸಿ ಅಧಿಕಾರ ಪ್ರದರ್ಶಿಸಿದ್ದಾನೆ. ಕೊನೆಗೂ ರಾಯಲ್ ಮೆನರ್ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅವರು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ದೂರು ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಗಮನಹರಿಸಿ, ನಿವಾಸಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.


