ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ನಟಿಸಿರುವ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ.
ಮುಂದಿನ ವಾರ ಬಿಡುಗಡೆ ಆಗಲಿರುವ ಡೆವಿಲ್ ಚಿತ್ರದ ಟ್ರೇಲರ್ ಶುಕ್ರವಾರ ಬೆಳಿಗ್ಗೆ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ 30 ಲಕ್ಷ ವೀಕ್ಷಣೆ ಆಗಿದೆ. ಟ್ರೇಲರ್ ಅದ್ಧೂರಿಯಾಗಿ ಮೂಡಿಬಂದಿದ್ದು, ಸಿನಿಮಾ ಬಗ್ಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಟ್ರೇಲರ್ ಕೊನೆಯಲ್ಲಿ ದರ್ಶನ್ ಹೇಳುವ ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ. ಬೇಗ ಬರ್ತಿನಿ ಚಿನ್ನ ಎಂದ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ರೇಲರ್ನ ಒಂದೊಂದು ಡೈಲಾಗ್ ಕೂಡಾ ಸಖತ್ ಪಂಚಿಂಗ್ ಆಗಿದೆ. ‘ಖೇಲ್ ಖತಂ, ನಾಟಕ್ ಬಂದ್, ಎಲ್ಲೋದ್ರೂ ಬರ್ತಿರಲ್ವಾ? ಏನ್ ನಿಮ್ ಪ್ರಾಬ್ಲಮ್’ ಅನ್ನೋದು ಆ ಡೈಲಾಗ್ಗಳಲ್ಲೊಂದು. ದಾಸನ ಸ್ವಾಗ್ಗೆ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಕೊನೆಯದಾಗಿ ಕಾಣಿಸಿಕೊಂಡ ಚಿತ್ರ ‘ಕಾಟೇರ’. 2023ರ ಡಿಸೆಂಬರ್ 29ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾದ ಈ ಚಿತ್ರ ಯಶಸ್ವಿಯಾಗಿದೆ.
ದರ್ಶನ್ ಬಣ್ಣ ಹಚ್ಚಿದ ‘ದಿ ಡೆವಿಲ್’ 2024ರ ಡಿಸೆಂಬರ್ನಲ್ಲೇ ತೆರೆಕಾಣಬೇಕಿತ್ತು. ಆದ್ರೆ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು ನಾಯಕ ನಟ ಜೈಲು ಸೇರಿದ ಹಿನ್ನೆಲೆ, ಸಿನಿಮಾ ವಿಳಂಬ ಎದುರಿಸಿತು.
ಜಾಮೀನಿನ ಮೇಲೆ ಹೊರಗಿದ್ದ ಕೆಲ ದಿನಗಳಲ್ಲಿ ದರ್ಶನ್, ಉಳಿದಿರುವ ತಮ್ಮ ಚಿತ್ರೀಕರಣವನ್ನು ಪೂರ್ಣಗೊಳಿಸಿಕೊಟ್ಟರು. ಇದೀಗ ಸಿನಿಮಾ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ನಾಯಕ ನಟ ದರ್ಶನ್ ಅನುಪಸ್ಥಿತಿಯಲ್ಲಿ ಚಿತ್ರತಂಡ ಪ್ರಚಾರ ನಡೆಸುತ್ತಿದೆ. ಇಂದು ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.
ಬಿಗ್ ಬಜೆಟ್ ಚಿತ್ರಗಳ ಪೈಪೋಟಿ
ಡಿಸೆಂಬರ್ ನಲ್ಲಿ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ಗಳ 3 ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಭರ್ಜರಿ ಬಾಕ್ಸ್ ಆಫೀಸ್ ಫೈಟ್ ನಡೆಯೋದು ಬಹುತೇಕ ಪಕ್ಕಾ ಆಗಿದೆ. ಮೊದಲ ಚಿತ್ರವಾಗಿ ನಟ ದರ್ಶನ್ ಮುಖ್ಯಭೂಮಿಕೆಯ ‘ದಿ ಡೆವಿಲ್’ ಡಿಸೆಂಬರ್ 11ರಂದು ಬಿಡುಗಡೆ ಆಗಲಿದೆ. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ’45’ ಶೀರ್ಷಿಕೆಯ ಸಿನಿಮಾ ಮತ್ತು ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಡಿಸೆಂಬರ್ 25ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.
ಅಪಾರ ಸಂಖ್ಯೆಯ ಅಭಿಮಾನಿಗಳು ಎದುರು ನೋಡುತ್ತಿರುವ “ದಿ ಡೆವಿಲ್” ಈಗಾಗಲೇ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇಂದು ಚಿತ್ರತಂಡ ಟ್ರೇಲರ್ ಅನಾವರಣಗೊಳಿಸಿದೆ. ಟ್ರೇಲರ್ ವೀಕ್ಷಿಸಿದ ಫ್ಯಾನ್ಸ್ ಮೆಚ್ಚುಗೆಯ ಮಳೆ ಹರಿಸುತ್ತಿದ್ದು, ಸಿನಿಮಾ ನೋಡುವ ಕಾತರ ದುಪ್ಪಟ್ಟಾಗಿದೆ ಎಂದು ತಿಳಿಸಿದ್ದಾರೆ.


