ಗಂಡನಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೆ ಪ್ರಿಯಕರ ಆಕೆಯ ಇಬ್ಬರು ಮಕ್ಕಳನ್ನು ಮೋರಿಗೆ ಎಸೆದ ಘಟನೆ ನೋಯ್ಡಾದ ಸೆಕ್ಟರ್ 142 ರ ಬಳಿ ನಡೆದಿದೆ. ಸ್ಥಳಕ್ಕೆ ಡೆಲಿವರಿ ನೀಡುವುದಕ್ಕೆ ಬಂದಿದ್ದ ಝೆಪ್ಟೊ ಡೆಲಿವರಿ ಬಾಯ್ ಮಕ್ಕಳ ಕೂಗಾಟ ಕೇಳಿ ಮೋರಿ ಬಳಿ ಹೋಗಿ ನೋಡಿ ಮೋರಿಗಿಳಿದು ಮಕ್ಕಳ ರಕ್ಷಣೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಡೆಲಿವರಿ ಬಾಯ್ ಪೊಲೀಸರಿಗೆ ದೂರು ನೀಡಿದ್ದರಿಂದ ಘಟಟನೆ ಬೆಳಕಿಗೆ ಬಂದಿದೆ.
ಮಕ್ಕಳ ತಾಯಿ ನೀಲಂ ಹಾಗೂ ಪ್ರಿಯಕರ 22 ವರ್ಷದ ಅಶಿಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಝೆಪ್ಟೋ ಡೆಲಿವರಿ ಬಾಯ್ ಓಂದೀಪ್ ಪಾರ್ಸೆಲ್ ತಲುಪಿಸಲು ಹೋಗುತ್ತಿದ್ದಾಗ ಮಕ್ಕಳ ಕಿರುಚಾಟ ಕೇಳಿದೆ. ಹಿಂಬಾಲಿಸಿ ಹೋದಾಗ ನೋಯ್ಡಾದ ಸೆಕ್ಟರ್ 142ರ ಹತ್ತಿರದ ಚರಂಡಿ ಬಳಿ ತಲುಪಿದ್ದಾರೆ. ಚರಂಡಿಯಲ್ಲಿ 4 ವರ್ಷದ ಮತ್ತು 3 ವರ್ಷದ ಇಬ್ಬರು ಮಕ್ಕಳನ್ನು ನೋಡಿದ್ದಾರೆ. ಓಂದೀಪ್ ಸ್ವತಃ ಇಬ್ಬರೂ ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಆಶಿಶ್ ಮತ್ತು ಮಕ್ಕಳ ತಾಯಿ ನೀಲಂ ಕಾನ್ಪುರದ ಒಂದೇ ಗ್ರಾಮದವರಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದರು ಎಂದು ನೋಯ್ಡಾದ ಎಸ್‌ಎಚ್‌ಒ ಮಿಶ್ರಾ ಹೇಳಿದ್ದಾರೆ. ನೀಲಂಗೆ ಆಶಿಶ್‌ನ ಸೋದರ ಸಂಬಂಧಿಯ ಜೊತೆ ಮದುವೆಯಾ ಗಿದ್ದು, ಇಬ್ಬರು ಮಕ್ಕಳಿದ್ದರು. ನಂತರದಲ್ಲಿ ನೀಲಂ ಹಾಗೂ ಅಶಿಶ್ ನಡುವೆ ಸ್ನೇಹ ಬೆಳೆದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ವಿಚಾರ ನೀಲಂ ಪತಿಗೆ ತಿಳಿದ ನಂತರ ಆರೋಪಿ ಆಶಿಶ್, ನೀಲಂ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕರೆದುಕೊಂಡು ಕಾನ್ಪುರದಿಂದ ನೋಯ್ಡಾಗೆ ಬಂದು ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಭದ್ರತಾ ಸಿಬ್ಬಂದಿಯಾಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಆತ ಮಕ್ಕಳನ್ನು ಇಟ್ಟುಕೊಳ್ಳುವುದಕ್ಕೆ ಇಷ್ಟಪಡಲಿಲ್ಲ, ದ್ವೇಷಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿ ದ್ದಾರೆ.
ಆರೋಪಿ ಆಶಿಶ್ ನೀಲಂಳನ್ನು ಮಾರುಕಟ್ಟೆಗೆ ಕರೆದೊಯ್ದು ಮನೆಗೆ ಬೇಕಾದ ಸರಕುಗಳನ್ನು ತೆಗೆದುಕೊಂಡು ಮನೆಗೆ ಹಿಂದಿರುಗುವ ಮೊದಲು ಅಲ್ಲಿಯೇ ಆಕೆಯನ್ನು ಬಿಟ್ಟು ಹೋಗಿದ್ದ. ಒಬ್ಬನೇ ಮನೆಗೆ ಹೋಗಿ ಮಕ್ಕಳನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದ. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಕೆ.ಸಿ. ವೀರಮಣಿ ಮಾತನಾಡಿ, ಇಬ್ಬರು ಮಕ್ಕಳು ಆರೋಗ್ಯವಾಗಿದ್ದು, ಪ್ರಸ್ತುತ ನೋಯ್ಡಾದ ಡೇ-ಕೇರ್ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.


