Menu

ಹೌದು, ನಾರಾಯಣಸ್ವಾಮಿ ಮನೆಯಿಂದಲೇ ವಾಚ್ ಕದ್ದಿದ್ದೇನೆ: ಛಲವಾದಿಗೆ ಡಿಸಿಎಂ ಡಿಚ್ಚಿ

ಹೌದು, ನಾನು  ನಾರಾಯಣಸ್ವಾಮಿ ಮನೆಯಿಂದಲೇ ವಾಚ್ ಕದ್ದಿದ್ದೇನೆ, ನಾರಾಯಣಸ್ವಾಮಿಯಿಂದ ನಾನು ಕಲಿಯುವುದೇನಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಲೇವಡಿ ಮಾಡಿದ್ದಾರೆ.

ಇದು ಕದ್ದಿರುವ ವಾಚಾ ಎಂದು ನಾರಾಯಣಸ್ವಾಮಿ ಅವರು ಕೇಳಿರುವ ಬಗ್ಗೆ ಮಾಧ್ಯಮದವರು ಹೇಳಿದಾಗ ಡಿಸಿಎಂ ಹೀಗೆ ಪ್ರತಿಕ್ರಿಯಿಸಿದರು. “ನನ್ನ ಬಳಿ ಇರುವ ದುಬಾರಿ ವಾಚ್ ಗಳ ಬಗ್ಗೆ ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ಆ ವಾಚ್ ಖರೀದಿ ಬಗ್ಗೆ ನನಗೆ ಗೊತ್ತು, ಬಿಜೆಪಿಯವರಿಗೇನು ಗೊತ್ತು?” ಎಂದು  ತಿರುಗೇಟು ನೀಡಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಬೇಕಾದರೆ ನಿಮ್ಮ ಅಫಿಡವಿಟ್ ನಲ್ಲಿ ದುಬಾರಿ ವಾಚ್ ಬಗ್ಗೆ ತಿಳಿಸಿಲ್ಲ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೇನು ಗೊತ್ತು? ನನ್ನ ಅಫಿಡವಿಟ್ ನನಗೆ ಗೊತ್ತು, ಕಾಸು ಕೊಟ್ಟಿರುವುದು ನಾನು, ಕ್ರೆಡಿಟ್ ಕಾರ್ಡ್ ಬಳಸಿರೋದು ನಾನು. ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ನನ್ನ ಬಳಿ ರೋಲೆಕ್ಸ್ ವಾಚ್ ಇರುವುದನ್ನೂ ಹೇಳಿದ್ದೇನೆ. ನಾರಾಯಣಸ್ವಾಮಿಯಿಂದ ಕಲಿಯುವುದೇನಿಲ್ಲ” ಎಂದು ಹೇಳಿದರು.

ಮಹಿಳಾ ನೌಕರರ ಸಮಾವೇಶದ ಬಗ್ಗೆ ಕೇಳಿದಾಗ, “ಮಹಿಳೆಯರಿಗೆ ಉತ್ತೇಜನ ನೀಡಲು ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾನು ನೀರಾವರಿ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದಾಗ, ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆಗೆ ಹೋಗಿದ್ದೆ. ಆಗ ಅಲ್ಲಿ ಒಬ್ಬ ವ್ಯಕ್ತಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದರೂ ಯೋಜನೆಗೆ ಅಡ್ಡಿಪಡಿಸುತ್ತಿದ್ದ. ಆಗ ಅಲ್ಲಿದ್ದ ಮೂವರು ಮಹಿಳಾ ಐಎಎಸ್ ಅಧಿಕಾರಿಗಳಿಗೆ ನಾನು ಕೆಲವು ಮಾರ್ಗದರ್ಶನ ನೀಡಿದೆ. ಅವರು ಕೇವಲ ಒಂದೇ ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಿದರು. ಹೀಗೆ ಮಹಿಳೆಯರು ಎಲ್ಲಾ ವಿಚಾರದಲ್ಲೂ ಸಮರ್ಥರಿದ್ದಾರೆ. ಅವರು ಪುರುಷರಿಗಿಂತ ಹೆಚ್ಚು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ನಾವು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಇಂದು ಮಹಿಳಾ ನೌಕರರ ಸಂಘದವರ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದೇವೆ. ಎಲ್ಲರೂ ಸಮಾನರು, ಪುರುಷ ಹಾಗೂ ಮಹಿಳೆಯರು ಎಂದು ತಾರತಮ್ಯ ಮಾಡಬಾರದು” ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *