Menu

ದಸರಾ ಉದ್ಘಾಟನೆಗೆ ಭಾನು ಮುಸ್ತಾಕ್‌ ಆಯ್ಕೆಗೆ ಅಭ್ಯಂತರವಿಲ್ಲ: ಬಿಜೆಪಿ ಸಂಸದ ಯಧುವೀರ ಒಡೆಯರ್

yadhuveer wadyar

ಸಾಹಿತಿ ಬಾನು ಮುಷ್ತಾಕ್ ಅವರಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ತಕರಾರಿಲ್ಲ. ನಮ್ಮ ಧಾರ್ಮಿಕ ಭಾವನೆಗೆ ಗೌರವ ಕೊಟ್ಟು ಉದ್ಘಾಟಿಸಲಿ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್‌ ಅವರು ಕನ್ನಡ ಸಾಹಿತ್ಯಕ್ಕೆ ಹಾಗೂ ಭಾಷೆಗೆ ನೀಡಿರುವ ಕೊಡುಗೆ ಅಪಾರವಾದುದು. ಅದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಸಾಮಾಜಿಕ ಹೋರಾಟವನ್ನೂ ಮಾಡಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಸಮಾನವಾದ ಹಕ್ಕುಗಳಿಗಾಗಿ ಹಾಗೂ ಅವರಿಗೆ ಮಸೀದಿಗೆ ಪ್ರವೇಶ ಕೊಡುವಂತೆ ಮಾಡಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ದಸರಾ ಉತ್ಸವಕ್ಕೆ ಧಾರ್ಮಿಕ ಪರಂಪರೆ, ಪದ್ಧತಿ ಹಾಗೂ ವಿಧಿ ಇರುವುದರಿಂದ ಅವರಿಗೆ ತಾಯಿ ಚಾಮುಂಡೇಶ್ವರಿಯಲ್ಲಿ ನಂಬಿಕೆ ಇದೆಯೇ, ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಕೆಲಸ ಮಾಡಿದ್ದಾರೆಯೇ ಎಂಬುದು ನಮ್ಮೆಲ್ಲರ ಪ್ರಶ್ನೆಯಾಗಿದೆ. ಅವರು ಚಾಮುಂಡೇಶ್ವರಿಯನ್ನು ಗೌರವಿಸುವುದಾಗಿ ಸ್ಪಷ್ಟನೆ ಕೊಟ್ಟರೆ, ಧಾರ್ಮಿಕ ಭಾವನೆಗೆ ಗೌರವವಿದ್ದರೆ ನಮಗೆ ಯಾವ ಸಮಸ್ಯೆಯೂ ಇಲ್ಲ’ ಎಂದು ಹೇಳಿದರು.

ದಸರಾ ಈಗ ಸಂವಿಧಾನದ ಚೌಕಟ್ಟಿನಲ್ಲಿ ಜಾತ್ಯತೀತವಾಗಿಯೇ ನಡೆದುಕೊಂಡು ಬರುತ್ತಿದೆ. ಆದರೆ, ಧಾರ್ಮಿಕ ವಿಚಾರವೂ ಆಗಿದೆ. ಕಾಂಗ್ರೆಸ್‌ ಸರ್ಕಾರವಿದ್ದಾಗ ಈ ಹಿಂದೆಯೂ ಧಾರ್ಮಿಕ ಆಚರಣೆ, ದೇಶದ ಪರಂಪರೆಗೆ ಧಕ್ಕೆ ಆಗುವಂತಹ ನಡವಳಿಕೆ ಹೊಂದಿದ್ದ ವ್ಯಕ್ತಿಗಳಿಗೂ ದಸರೆಗೆ ಆಹ್ವಾನ ನೀಡಲಾಗಿದೆ. ಗಿರೀಶ್‌ ಕಾರ್ನಾಡ್, ಕೆ.ಎಸ್.ನಿಸಾರ್‌ ಅಹಮದ್ ಅವರನ್ನೂ ಆಹ್ವಾನಿಸಿದ್ದರು. ಇದರಲ್ಲಿ ಜಾತ್ಯತೀತ ದೃಷ್ಟಿಯಲ್ಲಿ ಏನೂ ಸಮಸ್ಯೆ ಇಲ್ಲ. ಆದರೆ, ದಸರಾ ನಿರ್ದಿಷ್ಟವಾಗಿ ಧಾರ್ಮಿಕ ಆಚರಣೆ ಎನ್ನುವುದು ಮುಖ್ಯವಾಗುತ್ತದೆ. ಈಗಿನ ಸರ್ಕಾರಿ ವ್ಯವಸ್ಥೆಯಲ್ಲೂ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿಯೇ ವಿಧಿಯನ್ನು ಆರಂಭಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅತಿಥಿಗಳನ್ನು ಆಹ್ವಾನಿಸುವಾಗ ಯಾವ ಭಾವನೆಗೂ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಬೂಕರ್‌ ‍ಪ್ರಶಸ್ತಿಯ ಪಾಲುದಾರರಾಗಿರುವ ಅನುವಾದಕಿ, ಕೊಡಗಿನ ದೀಪಾ ಭಾಸ್ತಿ ಅವರಿಗೂ ದಸರೆಯ ಉದ್ಘಾಟನೆಯ ವೇದಿಕೆಯಲ್ಲಿ ಅವಕಾಶ ಕೊಟ್ಟರೆ ಸಮಾನ ಗೌರವ ನೀಡಿದಂತಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

Related Posts

Leave a Reply

Your email address will not be published. Required fields are marked *