ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದ ಘಟನೆ ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿಯೇ ಪೊಲೀಸ್ ಸಿಬ್ಬಂದಿ ಕಳ್ಳತನ ಮಾಡಿರುವುದು ಬಯಲಾಗಿದೆ.
ಆರೋಪಿಯನ್ನು ವಿಚಾರಣೆಗೆ ಕರೆ ತಂದ ಪೊಲೀಸ್ ಸಿಬ್ಬಂದಿ ಕಳ್ಳನ ಕಾರ್‌ನಲ್ಲಿದ್ದ ಬ್ಯಾಗ್‌ನಿಂದ ಲಕ್ಷ ಲಕ್ಷ ಹಣ ಕದ್ದಿರುವುದು ಗೊತ್ತಾಗಿದೆ. ಸೈಬರ್ ಪ್ರಕರಣದ ಆರೋಪಿಯನ್ನು ಬಂಧಿಸಿ ಕರೆ ತಂದ ಪೊಲೀಸ್ ಸಿಬ್ಬಂದಿ ಕಾರಿನಲ್ಲಿ 11 ಲಕ್ಷ ರೂ. ಬ್ಯಾಗ್‌ನಿಂದ ಎಗರಿಸಿದ್ದಾರೆ.
ಹೆಡ್ ಕಾನ್ಸಟೇಬಲ್ ಜೆಬಿಉಲ್ಲಾ ಹಣ ಕಳವು ಮಾಡಿದ ಆರೋಪಿ, ಕಳವು ಮಾಡಿ ಏನೂ ಗೊತ್ತೇ ಇಲ್ಲ ಎಂಬಂತಿದ್ದರು. ಪ್ರಕರಣದ ಆರೋಪಿ ಜಾಮೀನಿನ ಮೇಲೆ ಹೊರ ಬಂದ ಬಳಿಕ ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸೈಬರ್ ಪೊಲೀಸರ ಬಳಿ ಆರೋಪಿ ಪ್ರಶ್ನಿಸಿದ್ದ. ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನಲ್ಲಿದ್ದ ಹಣ ಬ್ಯಾಗ್ ಹೆಡ್ ಕಾನ್ಸಟೇಬಲ್ ಜೆಬಿಉಲ್ಲಾ ತೆಗೆದುಕೊಂಡು ಹೋದದ್ದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂಗೆ ದೂರು ಸಲ್ಲಿಕೆಯಾದ ಬಳಿಕ ಸೈಬರ್ ಪೊಲೀಸರು ಹೆಡ್ ಕಾನ್ಸಟೇಬಲ್ ಜೆಬಿಉಲ್ಲಾ ಮನೆ ಶೋಧಿಸಿದ್ದಾರೆ. ಆಗ ಜೆಬಿಉಲ್ಲಾ ಮನೆಯ ಒಳಕ್ಕೆ ಸೈಬರ್ ಪೊಲೀಸರ ಬಿಡದೆ ಗಲಾಟೆ ಮಾಡಿದ್ದರು. ಮನೆಯ ಬೆಡ್ ಕೆಳಗೆ ಕದ್ದಿದ್ದ ಹಣ ಇಟ್ಟುಕೊಂಡಿದ್ದರು. ದೂರು ಪಡೆದಿರುವ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನ ನಡೆಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಸಿದ್ದಾಪುರ ದರೋಡೆ ಕೇಸ್ ನಲ್ಲಿ ಪೊಲೀಸ್ ಕಾನ್ಸಟೇಬಲ್ ಅಣ್ಣಪ್ಪ ನಾಯಕ್ ಬಂಧನವಾದ ಬಳಿಕ ಈ ಘಟನೆ ನಡೆದಿದೆ. ಆ ನಂತರ ಜೆಪಿ ನಗರದಲ್ಲಿ ಹಿರಿಯ ನಾಗರಿಕರಿಂದ ಹಣ ಪಡೆದ ಹಿನ್ನೆಲೆ ಇಬ್ಬರು ಪೊಲೀಸ್ ಅಮಾನತುಗೊಂಡಿದ್ದರು. ಬೆಳ್ಳಂದೂರು ಪೊಲೀಸರ ವಿರುದ್ಧ ಸಾವಿನಲ್ಲೂ ಹಣ ಪಡೆದ ಆರೋಪವಿದೆ.


