ನವದೆಹಲಿ: ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಸಂಜೆ ನವದೆಹಲಿಗೆ ಬಂದಿಳಿಯಲಿದ್ದಾರೆ.
ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಹುಸ್ತರದ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ಪುಟಿನ್ ಪ್ರವಾಸದ ಪೂರ್ಣ ಮಾಹಿತಿ ಗೌಪ್ಯವಾಗಿ ಇಡಲಾಗಿದೆ.
ಪುಟಿನ್ ಭೇಟಿ ವೇಳೆ ರಕ್ಷಣೆ, ತೈಲ ಖರೀದಿ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಎರಡು ದಿನಗಳ ಪ್ರವಾಸದ ವೇಳೆ ಹೈದರಾಬಾದ್ ಗೆ ಭೇಟಿ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಪುಟಿನ್ ಆಗಮನದಿಂದ ಮರಳುವವರೆಗೂ ಅವರ ಪ್ರತಿ ಚಲನವಲನಗಳನ್ನು ಜಂಟಿ ಕಾರ್ಯಾಚರಣೆ ಬಹು ಭದ್ರತಾ ಘಟಕಗಳಿಂದ ಟ್ರ್ಯಾಕ್ ಮಾಡಲಾಗುವುದು. ಪ್ರತೀ ನಿಮಿಷದ ಸಹಯೋಜನೆಯೊಂದಿಗೆ ಭದ್ರತಾ ಪಡೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸಂಬಂಧಪಟ್ಟ ಎಲ್ಲ ಸಂಸ್ಥೆಗಳು ಗರಿಷ್ಠ ಪ್ರಮಾಣ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಕಟ್ಟುನಿಟ್ಟಿನ ಕಣ್ಗಾವಲಿಗೆ ಭದ್ರತೆಗೆ 5,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪುಟಿನ್ ಸಂಚರಿಸುವ ರಸ್ತೆಗಳ ನೈರ್ಮಲ್ಯೀಕರಣ: ಪುಟಿನ್ ಅವರು ಸಂಚರಿಸುವ ಮಾರ್ಗದ ಭದ್ರತೆಯನ್ನು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರಸ್ತೆಗಳ ಟ್ರಾಫಿಕ್ ವ್ಯವಸ್ಥೆ ಮತ್ತು ನೈರ್ಮಲ್ಯೀಕರಣದ ವ್ಯವಸ್ಥೆ ಮಾಡಲಾಗಿದೆ.
ವಿವಿಐಪಿಗಳ ಸಂಚಾರಕ್ಕಾಗಿ ನಿಗದಿಸಿರುವ ಎಲ್ಲ ಮಾರ್ಗಗಳನ್ನು ಮುಂಚಿತವಾಗಿಯೇ ಸುರಕ್ಷಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ಸಂಚಾರ ಸಲಹೆಗಳನ್ನು ನೀಡಲಾಗಿದೆ. ಈ ವೇಳೆ ಡ್ರೋನ್ ಹಾರಾಟವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಹು ಹಂತದ ಬಿಗಿ ಭದ್ರತೆ: ದೆಹಲಿ ಪೊಲೀಸ್, ಕೇಂದ್ರ ಸಂಸ್ಥೆಗಳು ಹಾಗೂ ಪುಟಿನ್ ಅವರ ವೈಯಕ್ತಿಕ ಭದ್ರತಾ ತಂಡಕ್ಕೆ ಬಹು ಹಂತದ ಭದ್ರತೆ ರಚಿಸಲಾಗಿದ್ದು ಸ್ವಾಟ್(SWAT) ತಂಡಗಳು, ಭಯೋತ್ಪಾದನಾ ನಿಗ್ರಹ ಘಟಕಗಳು, ಸ್ನೈಪರ್‌ಗಳು ಮತ್ತು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
ಇದಕ್ಕೂ ಹೆಚ್ಚುವರಿಯಾಗಿ ಹೈ ಡೆಫಿನೆಷನ್ ಸಿಸಿಟಿವಿ ನೆಟ್ವರ್ಕ್ ಮತ್ತು ತಾಂತ್ರಿಕ ಮೇಲ್ವಿಚಾರಣೆ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಪಾದಚಾರಿಗಳ ಚಲನವಲನ ಹಾಗೂ ಟ್ರಾಫಿಕ್ ನಿರ್ಬಂಧಿಸಲಾಗಿದ್ದು, ಪ್ರಮುಖ ಅಡೆತಡೆಗಳನ್ನು ತಪ್ಪಿಸಲು ಮುಂಚಿತವಾಗಿಯೇ ಸಾಕಷ್ಟು ಎಚ್ಚರಿಕೆಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ, ರಾಷ್ಟ್ರಪತಿಯಿಂದ ವಿಶೇಷ ಔತಣಕೂಟ
23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ಅಂಗವಾಗಿ ರಷ್ಯಾ ಅಧ್ಯಕ್ಷ ಪುಟಿನ್ ಇಂದು ಸಂಜೆ ನವದೆಹಲಿಗೆ ಬಂದಿಳಿಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ. ಬಳಿಕ ಅವರೊಂದಿಗೆ ಖಾಸಗಿ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.


