ನಟ ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಕ್ಷಮೆಯಾಚಿಸಿದ್ದಾರೆ. ಈ ಮೂಲಕ ತಾವು ರಿಯಾಲಿಟಿ ಶೋನಲ್ಲಿ ಆಡಿದ ಮಾತಿನಿಂದ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಮೇ ತಿಂಗಳಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಶಿವರಾಜ್ಕುಮಾರ್, ದರ್ಶನ್ ಮತ್ತು ಧ್ರುವ ಸರ್ಜಾ ಅವರುಗಳ ಬಗ್ಗೆ ಕಿರುತೆರೆ ರಿಯಾಲಿಟಿ ಶೋ ಖ್ಯಾತಿಯ ಮಡೆನೂರು ಮನು ಮಾತನಾಡಿರೋ ಆಡಿಯೋ ವೈರಲ್ ಆಗಿ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅದೇ ಸಂದರ್ಭ ಅತ್ಯಾಚಾರ ಆರೋಪವೂ ಮಡೆನೂರು ಮನು ವಿರುದ್ಧ ಕೇಳಿಬಂದಿತ್ತು. ಈ ಗಂಭೀರ ಆರೋಪಗಳಿಂದಾಗಿ ಸಾಕಷ್ಟು ಟೀಕೆ, ಅಭಿಮಾನಿಗಳ ಆಕ್ರೋಶ ಎದುರಿಸಿದ ಉದಯೋನ್ಮುಖ ನಟ, ಇಂದು ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ.
ಅವಾಚ್ಯ ಶಬ್ದಗಳ ಬಳಕೆ ಹಿನ್ನೆಲೆ, ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ನಟ ಧ್ರುವ ಸರ್ಜಾ ಅವರ ಬಳಿ ತೆರಳಿ ಮಡೆನೂರು ಮನು ಕ್ಷಮೆ ಕೇಳಿದ್ದರು. ಇಂದು ಕರುನಾಡ ಚಕ್ರವರ್ತಿಯ ಭೇಟಿಗೆ ಅವಕಾಶ ಸಿಕ್ಕಿದೆ. ಈ ವಿಡಿಯೋ ಎಲ್ಲೆಡೆ ಸಕತ್ ಸದ್ದು ಮಾಡುತ್ತಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕಾರಿನಿಂದ ಇಳಿಯುತ್ತಿದ್ದಂತೆ, ಅವರ ಕಾಲಿಗೆ ಬಿದ್ದು, ಭಾವುಕರಾಗಿ ಮಡೆನೂರು ಮನು ಕ್ಷಮೆ ಕೇಳಿದ್ದಾರೆ. ಶಿವಣ್ಣ ಕೂಡಾ ಅವರ ತಪ್ಪನ್ನು ಕ್ಷಮಿಸಿ, ಸಿನಿಮಾ ಕೆಲಸಗಳಿಗೆ ಶುಭ ಕೋರಿದ್ದಾರೆ. ‘ಯಾರೇ ಬೈದ್ರೂ, ಹೊಗಳಿದ್ರೂ, ತೆಗಳಿದ್ರೂ ಅವನ್ನು ಮನಸ್ಸಿಗೆ ತೆಗೆದುಕೊಳ್ಳೋದಿಲ್ಲ’ ಎಂದು ಶಿವಣ್ಣ ತಿಳಿಸುತ್ತಿದ್ದಂತೆ, ಅಲ್ಲಿದ್ದವರು ‘ದೇವರು ಅಣ್ಣ ನೀವು’ ಎಂದು ತಿಳಿಸಿದ್ದಾರೆ.
ನಿಮ್ಮ ಬೆಂಬಲ ಇದ್ರೆ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮರು ಬಿಡುಗಡೆ ಮಾಡುತ್ತೇವೆ ಎಂದು ಮಡೆನೂರು ಮನು ತಿಳಿಸುತ್ತಿದ್ದಂತೆ, ಮಾಡಿ ಒಳ್ಳೆ ಶೀರ್ಷಿಕೆಯ ಸಿನಿಮಾ. ಯಾರೂ ಮೇಲಲ್ಲ, ಕೀಳಲ್ಲ. ಎಲ್ಲರೂ ಒಂದೇ ಎಂದು ಶಿವಣ್ಣ ಹೇಳಿದರು.